ಗುಜರಾತ್, ಬಿಹಾರದಲ್ಲಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು?: ಪ್ರತಾಪ್ ಸಿಂಹರಿಗೆ ಎಸ್‌ಡಿಪಿಐ ಟಾಂಗ್ಆಗಸ್ಟ್ 06, 2025 ಮೈಸೂರು : ಸತತ 25 ವರ್ಷಗಳಿಂದ ಬಿಜೆಪಿ ಆಡಳಿತವಿರುವ ಗುಜರಾತ್ ರಾಜ್ಯದಲ್ಲಿ ಮತ್ತು ಬಿಜೆಪಿ, ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರ ರಾಜ್ಯದಲ್ಲಿ ಸತತವಾಗಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು ಹೇಳು? ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸುವ ಮೂಲಕ ಕೆಆರ್‍ಎಸ್ ಜಲಾಶಯಕ್ಕೆ ಟಿಪ್ಪು ಅಡಿಗಲ್ಲು ಹಾಕಿದ್ದಾರೆ ಎಂಬ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ಕುರಿತು, ಯಾವ ಮುಲ್ಲ ಡಿಪಿಆರ್ ಮಾಡಿಸಿದ್ದು ಎಂದು ಪ್ರಶ್ನಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು.ಮಹದೇವಪುರ ರಸ್ತೆಯಲ್ಲಿರುವ ಎಸ್‍ಡಿಪಿಐ ಕಚೇರಿಯಲ್ಲಿ ಬುಧವಾರ ಮದ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಒಬ್ಬ ದಡ್ಡ ಮತ್ತು ಮೂರ್ಖ, ಆತನಿಗೆ ಇತಿಹಾಸ ಗೊತ್ತಿಲ್ಲ, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಕೆಆರ್‍ಎಸ್ ಜಲಾಶವನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂದು ಎಲ್ಲೂ ಹೇಳಿಲ್ಲ, ಕಾವೇರಿ ನದಿಗೆ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಿ ಅದಕ್ಕೆ ಮೊದಲು ಅಡಿಗಲ್ಲು ಹಾಕಿಸಿದ್ದು ಟಿಪ್ಪು ಎಂದು ಹೇಳಿದ್ದಾರೆ ಅಷ್ಟೇ, ಈ ಶಾಸನವನ್ನು ಕೆಆರ್‍ಎಸ್ ಜಲಾಶಯ ಕಟ್ಟಿಸಿದ ಮಹಾತ್ಮರಾದ ನಾಲ್ವಡಿ ಕೃಷ್ಣರಾಜ ಪಡೆಯರ್ ಅವರೇ ಜಲಾಶಯದ ಬಳಿ ಟಿಪ್ಪು ಪರ್ಶಿಯನ್ ಭಾಷೆಯಲ್ಲಿ ಬರೆಸಿದ್ದ ಶಾಸನವನ್ನು ಕನ್ನಡದಲ್ಲಿ ಬರೆಸಿ ಜಲಾಶಯದ ಬಳಿಯೇ ಹಾಕಿಸುವ ಮೂಲಕ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಆದರೇ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ಕಳೆದ 25 ವರ್ಷಗಳಿಂದಲೂ ಬಿಜೆಪಿ ಸರ್ಕಾರದ ಆಡಳಿತವೇ ಇದೆ. ಪ್ರಧಾನಿ ಮೋದಿಯವರು ಮೊದಲು ಗುಜರಾತ್ ಮುಖ್ಯಮಂತ್ರಿ ಆಗಿದ್ದವರು, ಆ ರಾಜ್ಯದಲ್ಲಿ ಎಷ್ಟು ಸೇತುವೆಗಳು ಕುಸಿದಿವೆ, ಎಷ್ಟೋಂದು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಮತ್ತು ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರದಲ್ಲಿಯೂ ಹತ್ತಾರು ಸೇತುವೆಗಳು ಕುಸಿದಿವೆ, ಅವುಗಳ ಡಿಪಿಆರ್ ಮಾಡಿದವರು ಯಾರು ಹೇಳು ನೋಡೋಣ? ಎಂದು ಖಾರವಾಗಿ ಪ್ರಶ್ನಿಸಿದರು.ವಿಶ್ವವಿಖ್ಯಾತ ಆಗ್ರಾದ ತಾಜ್‍ಮಹಲ್, ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ್, ಅಷ್ಟೇ ಏಕೆ ಕರ್ನಾಟಕದಲ್ಲಿರುವ ಗೋಲ್‍ಗುಂಬಜ್ ಕಟ್ಟಡಗಳ ಡಿಪಿಆರ್ ಮಾಡಿದವರು ಯಾರು ಎಂಬುದು ನಿನಗೆ ಗೊತ್ತಿದೆಯಾ? ನೀನೊಬ್ಬ ಮೂರ್ಖ ನಿನ್ನಂತೆ ಇರುವ ಮೂರ್ಖರು ಮಾತ್ರ ನಿನ್ನ ಮಾತಿಗೆ ಶಹಬ್ಬಾಸ್ ಹೇಳುತ್ತಾರೆ, ಬುದ್ಧಿವಂತರು ನಿನ್ನ ಮಾತಿಗೆ ಉಗಿಯುತ್ತಾರೆ ಎಂದು ಝಾಡಿಸಿದರು.ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಖಾನ್ ಅವರು ಈ ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನೀರಾವರಿ ಇಲ್ಲದ ಸಂದರ್ಭದಲ್ಲಿ ಚೀನಾದಿಂದ ರೇಷ್ಮೆ ಬೆಳೆಯನ್ನು ತರಿಸಿ ತನ್ನ ರಾಜ್ಯದಲ್ಲಿ ಅಭಿವೃದ್ಧಿಪಡಿಸಿದರು, ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಿದರು. 1782 ರಲ್ಲಿ ಟಿಪ್ಪು ಸುಲ್ತಾನ್ ಅವರು, ಕಾವೇರಿ ನದಿಗೆ 70 ಅಡಿ ಎತ್ತರದ ಅಣೆಕಟ್ಟೆ ಕಟ್ಟುವ ಮೂಲಕ ರೈತರ ಬದುಕು ಹಸನು ಮಾಡಲು ಯತ್ನಿಸಿ ಅದಕ್ಕೆ ಹಣಕಾಸು ಹೊಂದಿಸಿದ್ದರು, ಆದರೇ, 3ನೇ ಮೈಸೂರು ಆಂಗ್ಲೋ ಯುದ್ಧದಲ್ಲಿ ಟಿಪ್ಪು ಬ್ರಿಟೀಷರ ವಿರುದ್ಧ ಸೋಲು ಅನುಭವಿಸಿ ಯುದ್ಧದ ಖರ್ಚು 3 ಕೋಟಿ ಹಣವನ್ನು ಬ್ರಿಟಿಷರಿಗೆ ಕೊಡಲಾಗದೆ ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ದು ಯಾರೂ ಮರೆಯಲು ಸಾಧ್ಯವಿಲ್ಲ, ಬಳಿಕ ನಾಲ್ಕನೇ ಮೈಸೂರು-ಆಂಗ್ಲೋ ಯುದ್ಧದಲ್ಲಿ ಟಿಪ್ಪು ವೀರ ಮರಣ ಹೊಂದಿದಾಗ ಅಣೆಕಟ್ಟೆ ಕಟ್ಟಲು ಆಗುವುದಿಲ್ಲ, ಆದರೇ ರಾಜರ್ಷಿ ನಾಲ್ವಡಿ ಕೃಷ್ಣರಾಯ ಒಡೆಯರ್ ಅವರು ಕೆಆರ್‍ಎಸ್ ಜಲಾಶಯ ಕಟ್ಟುವ ಸಂದರ್ಭದಲ್ಲಿ ಸಿಕ್ಕ ಶಾಸನವನ್ನು ಅದೇ ಜಾಗದಲ್ಲಿ ಇರಿಸಿದ್ದರು. ನಿಮ್ಮಂತಹವರು ಏನಾದರೂ ಆಗ ಇದ್ದಿದ್ದರೆ ಆ ಶಾಸನವನ್ನು ಒಡೆದುಹಾಕುತ್ತಿದ್ದರು ಎಂದು ವ್ಯಂಗ್ಯವಾಡಿದರು.ಟಿಪ್ಪು ಸುಲ್ತಾನ್ ತನ್ನ ರಾಜ್ಯದ ಒಟ್ಟು ಭೂಮಿಯ ಶೇ.30 ರಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರು, ಅವರು ತಮ್ಮ ರಾಜ್ಯದಲ್ಲಿ 40 ಸಾವಿರ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದರು, ನೀನು 10 ವರ್ಷ ಎಂಪಿ ಆಗಿದ್ದೆ ಎಷ್ಟು ಕೆರೆಗಳನ್ನು ಕಟ್ಟಿಸಿದ್ದಿಯಾ ಅಥವಾ ಎಷ್ಟು ಕೆರೆಗಳ ಹೂಳು ಎತ್ತಿಸಿದ್ದೀಯಾ ಹೇಳು? ಟಿಪ್ಪು ಸುಲ್ತಾನರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ನೀನು ಮೈಸೂರು-ಕೊಡಗು ಜಿಲ್ಲೆಯಲ್ಲಿ 40-50 ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂ ರಹಿತರು ಅರ್ಜಿ ನಮೂನೆ 50, 53, 57 ರಲ್ಲಿ ತಮಗೆ ಭೂ ಒಡೆತನ ನೀಡುವಂತೆ ಸರ್ಕಾರಕ್ಕೆ 10 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿ ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಎಷ್ಟು ಜನರಿಗೆ ನೀನು ಭೂಮಿ ಕೊಡಿಸಿದ್ದೀಯಾ ಹೇಳು? ಟಿಪ್ಪು ಸುಲ್ತಾನರು ತಮ್ಮ ಆಳ್ವಿಕೆಯಲ್ಲೇ ಭೂ ರಹಿತ ದಲಿತರಿಗೆ, ಇತರರಿಗೆ ಭೂಮಿ ಒಡೆತನ ನೀಡಿದ್ದರು ಎನ್ನುವುದು ನಿನಗೆ ಗೊತ್ತಿಲ್ಲದಿದ್ದರೆ, ಇತಿಹಾಸ ಓದು ಎಂದು ಅಬ್ದುಲ್ ಮಜೀದ್ ಟಾಂಗ್ ನೀಡಿದರು. 1340ರಲ್ಲಿ ಹೊಯ್ಸಳರ ಕಾಲದಲ್ಲಿ ಮುಡುಕುತೋರೆ ಬಳಿ ಅಣೆಕಟ್ಟೆ ಕಟ್ಟಲಾಗಿತ್ತು, ಅದಕ್ಕೂ ಮುನ್ನ ಗಂಗರು ಪಾಂಡವಪುರದ ಬಳಿ ಅಣೆಕಟ್ಟೆ ಕಟ್ಟಿದ್ದಾರೆ. ಅದರ ಡಿಪಿಆರ್ ಕೇಳಲು ನಿನಗೆ ಆಗುತ್ತದೆಯಾ? ಪದೇ ಪದೇ ಟಿಪ್ಪು ಸುಲ್ತಾನರ ಅವಹೇಳನ ಸಲ್ಲದು, ಟಿಪ್ಪು ಒಬ್ಬ ಮುಸ್ಲಿಂ ದೊರೆ ಎಂದು ಬಿಜೆಪಿಯವರು ಅವರ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೇ, ಇತಿಹಾಸವನ್ನು ಬದಲಾಯಿಸಲು ಅಸಾಧ್ಯ ಎಂದರು.ಸುದ್ದಿಗೋಷ್ಠಿಯಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸ್ವಾಮಿ, ಮೈಸೂರು ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ರಫತ್ ಖಾನ್, ಫಿರ್ದೋಸ್, ಸಫಿಯುಲ್ಲಾ ಇದ್ದರು.

Recent Posts

ಸ್ವಾತಂತ್ರ್ಯ ಪ್ರಯುಕ್ತ ಸಭಾ ಕಾರ್ಯಕ್ರಮ

INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್‌…

3 days ago

ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ

Let's Protect the Freedom, Save the Nation آئیے آزادی کی حفاظت کرین ملک کو بچائیں…

3 days ago

79 Happy Independence Day

Let's Protect The Freedom, Save The Nation "Let us remember the sacrifices that brought us…

3 days ago

79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

"ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ" ಈ ಸ್ವಾತಂತ್ರ್ಯ ದಿನದಂದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸತ್ಯವನ್ನು ಮಾತನಾಡಲು ಧೈರ್ಯ ಮಾಡಿದ…

3 days ago