ಕೇಂದ್ರದ ಬಿಜೆಪಿ ಸರ್ಕಾರ ಪ್ರಸ್ತಾಪಿಸಿರುವ ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೀವ್ರವಾಗಿ ವಿರೋಧಿಸುತ್ತದೆ. ಈ ಮಸೂದೆಯು ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲುಗೊಳಿಸಿ, ಬಿಜೆಪಿ ದಶಕಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡುವ ಹಾಗೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಗೆ ಪೂರ್ವಭಾವಿ ಪ್ರಯೋಗ ನಡೆಸುವ ವ್ಯವಸ್ಥಿತ ರಾಜಕೀಯ ತಂತ್ರವಾಗಿದೆ.
ಕ್ಷೇತ್ರ ಮರುವಿಂಗಡಣೆಯು ಅತ್ಯಂತ ಮಹತ್ವದ ವಿಚಾರವಾಗಿದೆ. ಇದನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲಿನ ಲೆಕ್ಕಾಚಾರವಾಗಿ ಪರಿಗಣಿಸದೆ, ಒಕ್ಕೂಟ ವ್ಯವಸ್ಥೆಯ ತತ್ವಗಳು, ರಾಜ್ಯಗಳ ಹಕ್ಕುಗಳು ಹಾಗೂ ಸಮಾಜದ ಎಲ್ಲಾ ವರ್ಗಗಳ ಸಮಾನ ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕು.
ಆದರೆ ಪ್ರಸ್ತಾಪಿತ ಶೇ.50ರಷ್ಟು ಲೋಕಸಭಾ ಸ್ಥಾನಗಳ ಹೆಚ್ಚಳವು ನ್ಯಾಯಸಮ್ಮತ ಪ್ರಾತಿನಿಧ್ಯವನ್ನು ಖಾತರಿಪಡಿಸುವ ಪರಿಹಾರವಲ್ಲ. ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಸಮಾನವಾಗಿ ಶೇ.50ರಷ್ಟು ಹೆಚ್ಚಿಸಿದರೂ ಉತ್ತರ ಮತ್ತು ದಕ್ಷಿಣ ಭಾರತದ ರಾಜ್ಯಗಳ ನಡುವಿನ ರಾಜಕೀಯ ಪ್ರಾತಿನಿಧ್ಯದ ಅಂತರ ಮತ್ತಷ್ಟು ಹೆಚ್ಚಾಗಲಿದೆ. ಇದು ದಕ್ಷಿಣ ಭಾರತದ ರಾಜ್ಯಗಳಿಗೆ ಮಾಡುವ ಅನ್ಯಾಯವಾಗಿದೆ. ಸಂಸತ್ತಿನಲ್ಲಿ ಕಾನೂನುಗಳನ್ನು ರೂಪಿಸಲು ಹಾಗೂ ತಿದ್ದುಪಡಿ ಮಾಡಲು ಒಟ್ಟು ಸಂಸದೀಯ ಸದಸ್ಯರ ಸಂಖ್ಯೆಯೇ ನಿರ್ಣಾಯಕವಾಗಿರುವುದರಿಂದ, ದಕ್ಷಿಣ ಭಾರತದ ರಾಜ್ಯಗಳ ಬೆಂಬಲವನ್ನು ಪರಿಗಣಿಸುವ ಅನಿವಾರ್ಯತೆಯೇ ಕೇಂದ್ರ ಸರ್ಕಾರಕ್ಕೆ ಇಲ್ಲದಂತಾಗಬಹುದು. ಇದು ಭಾರತದ ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆ ತಂದು, ರಾಜ್ಯಗಳ ನಡುವಿನ ಸಮಾನ ರಾಜಕೀಯ ಪ್ರಾತಿನಿಧ್ಯದ ತತ್ವವನ್ನು ದುರ್ಬಲಗೊಳಿಸಲಿದೆ.
ಮೋದಿ ಸರ್ಕಾರದ ರಾಜಕೀಯ ಉದ್ದೇಶವು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 800ಕ್ಕೂ ಹೆಚ್ಚಿಸಿ, ನಂತರ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧರಿಸುವ ಮೂಲಕ ಬಿಜೆಪಿ ಪರವಾಗಿರುವ ಕ್ಷೇತ್ರಗಳ ಸಂಖ್ಯೆಯನ್ನು ಶೇ.10ರವರೆಗೆ ಹೆಚ್ಚಿಸುವುದಾಗಿದೆ ಎಂಬ ಆತಂಕವಿದೆ. ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತಗಳ ಪ್ರಭಾವವನ್ನು ದುರ್ಬಲಗೊಳಿಸುವ ರೀತಿಯಲ್ಲಿ ಕ್ಷೇತ್ರಗಳನ್ನು ಮರುವಿನ್ಯಾಸಗೊಳಿಸಲಾಗಿದೆ ಎಂಬ ಆರೋಪಗಳಿವೆ. ಅದೇ ಮಾದರಿಯಲ್ಲಿ ದೇಶಾದ್ಯಂತ ಕ್ಷೇತ್ರಗಳ ಗಡಿಗಳನ್ನು ರಾಜಕೀಯ ಅನುಕೂಲಕ್ಕೆ ತಕ್ಕಂತೆ ಮರುವಿಂಗಡಿಸಿ, ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರಗಳನ್ನು ವಿಭಜಿಸುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರ ಸಂಸದೀಯ ಪ್ರಾತಿನಿಧ್ಯವನ್ನು ಇಲ್ಲವಾಗಿಸುವ ಪ್ರಯತ್ನ ನಡೆಯಬಹುದೆಂಬ ಗಂಭೀರ ಆತಂಕವಿದೆ.
ಅದೇ ರೀತಿ, ಲೋಕಸಭಾ ಸದಸ್ಯರ ಸಂಖ್ಯೆಯನ್ನು ಸುಮಾರು 850ಕ್ಕೆ ಹೆಚ್ಚಿಸುವುದರಿಂದ ಸದನದಲ್ಲಿ ಚರ್ಚೆ ಮತ್ತು ವಿಚಾರ ವಿನಿಮಯಕ್ಕೆ ಲಭ್ಯವಾಗುವ ಸಮಯ ಮತ್ತಷ್ಟು ಕಡಿಮೆಯಾಗಲಿದೆ. ಇದರಿಂದ ಸಂಸತ್ತು ಗಂಭೀರ ಚರ್ಚೆ, ಸಮಾಲೋಚನೆ ಮತ್ತು ರಚನಾತ್ಮಕ ನಿರ್ಧಾರಗಳ ವೇದಿಕೆಯಾಗುವ ಬದಲು ಕೇವಲ ಸದಸ್ಯರ ಸಭೆಯಾಗಿ ಉಳಿಯುವ ಅಪಾಯವಿದೆ.
ಈ ಹಿನ್ನೆಲೆಯಲ್ಲಿ, 2025ರಲ್ಲಿ ತಮಿಳುನಾಡು ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ, ಜನಸಂಖ್ಯೆಯ ಸ್ಥಿರೀಕರಣದ ಉದ್ದೇಶದಿಂದ ಕ್ಷೇತ್ರ ಮರುವಿಂಗಡಣೆಯನ್ನು 2126ರವರೆಗೆ ಮುಂದೂಡಬೇಕು ಹಾಗೂ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಗರಿಷ್ಠ 550ಕ್ಕೆ ಸೀಮಿತಗೊಳಿಸಬೇಕು ಎಂದು SDPI ಆಗ್ರಹಿಸುತ್ತದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಜನವರ್ಗಗಳಿಗೆ ನ್ಯಾಯ ಒದಗಿಸುವ ಸಮತೋಲಿತ ಪರಿಹಾರ ಕಂಡುಕೊಳ್ಳಲು ಇದೇ ಸೂಕ್ತ ಮಾರ್ಗವಾಗಿದೆ.
ಅದೇ ರೀತಿ, ಮಹಿಳಾ ಮೀಸಲಾತಿಯನ್ನು ಯಾವುದೇ ಪೂರ್ವಸಿದ್ಧತೆ ಅಥವಾ ಸಮಗ್ರ ಸಾಮಾಜಿಕ ನ್ಯಾಯದ ಪರಿಗಣನೆಯಿಲ್ಲದೆ ಏಕಪಕ್ಷೀಯವಾಗಿ ಜಾರಿಗೊಳಿಸಬಾರದು. ಸಮಾಜದ ಎಲ್ಲಾ ವರ್ಗಗಳ, ಜಾತಿಗಳ ಹಾಗೂ ಅಂಚಿನಲ್ಲಿರುವ ಸಮುದಾಯಗಳ ಮಹಿಳೆಯರಿಗೆ ಸಮಾನ ಮತ್ತು ಸಮರ್ಪಕ ಪ್ರಾತಿನಿಧ್ಯ ದೊರೆಯುವಂತೆ ಸೂಕ್ತ ಒಳಮೀಸಲಾತಿಯನ್ನು ಕಡ್ಡಾಯವಾಗಿ ಕಲ್ಪಿಸಬೇಕು.
ದೇಶದ ಪ್ರಜಾಪ್ರಭುತ್ವದ ಚೌಕಟ್ಟು ಮತ್ತು ರಾಷ್ಟ್ರೀಯ ಏಕತೆಗೆ ಅಪಾಯ ತಂದೊಡ್ಡುವ ಈ ಅಪಾಯಕಾರಿ ಕ್ರಮದಿಂದ ಕೇಂದ್ರ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು. ಈ ನಿರ್ಣಾಯಕ ಸಂದರ್ಭದಲ್ಲಿ DMK ಹಾಗೂ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಸೇರಿದಂತೆ ಎಲ್ಲಾ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಪ್ರಜಾಪ್ರಭುತ್ವಪರ ಶಕ್ತಿಗಳು ಒಂದಾಗಿ ನಿಲ್ಲಬೇಕು.
ನಮ್ಮ ಒಗ್ಗಟ್ಟಿನಲ್ಲಿ ಉಂಟಾಗುವ ಯಾವುದೇ ಬಿರುಕು ಬಿಜೆಪಿಯ ರಾಜಕೀಯ ಕಾರ್ಯತಂತ್ರಗಳಿಗೆ ಸುಲಭವಾಗಿ ದಾರಿ ಮಾಡಿಕೊಡಬಹುದು. ಆದ್ದರಿಂದ ದೇಶದ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸಲು ಎಲ್ಲಾ ಪ್ರಜಾಪ್ರಭುತ್ವಪರ ಶಕ್ತಿಗಳು ಒಗ್ಗಟ್ಟಿನಿಂದ, ದೃಢ ಸಂಕಲ್ಪದೊಂದಿಗೆ ಹೋರಾಟಕ್ಕೆ ಮುಂದಾಗಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರೆ ನೀಡುತ್ತದೆ.
SDPI DAVANGERE DISTRICT COMMITTEE FELICITATES KARNATAKA RAJYOTSAVA AWARDEE PROF. A.H. RAJASAB The Social Democratic Party…
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ರಾಜಾಸಾಬ್ ಅವರಿಗೆ ಎಸ್ಡಿಪಿಐ ದಾವಣಗೆರೆ ಜಿಲ್ಲಾ ಸಮಿತಿಯಿಂದ ಸನ್ಮಾನ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ…
ನವೆಂಬರ್ 25ರಂದು ಬೆಂಗಳೂರಿನ ಉರ್ದು ಹಾಲ್ನಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಸಮಿತಿಯ…
ನವೆಂಬರ್ 25ರಂದು ಬೆಂಗಳೂರಿನ ಉರ್ದು ಹಾಲ್ನಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಸಮಿತಿಯ…
01 ನವೆಂಬರ್ 25ರಂದು ಬೆಂಗಳೂರಿನ ಉರ್ದು ಹಾಲ್ನಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ…
ಉಜೈನ್ನಲ್ಲಿ ಐತಿಹಾಸಿಕ ಮಸೀದಿಗಳು ಮತ್ತು ದರ್ಗಾಗಳ ಧ್ವಂಸ.. ಇದು ಸಂವಿಧಾನಾತ್ಮಕ ಹಕ್ಕುಗಳ ಮೇಲಿನ ದಾಳಿಯಾಗಿದೆ. SDPI