ಬೆಂಗಳೂರು. ಸೆ.7: ಇಂಧನ ಸಚಿವ ಸುನಿಲ್ ಕುಮಾರ್ ನ್ಯಾಯಾಲಯದ ಆದೇಶವನ್ನು ತಿರುಚಿ ನೀಡಿರುವ ಹೇಳಿಕೆಯು ದ್ವೇಷಪೂರಿತವಾಗಿದೆ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.
ಈ ಬಗ್ಗೆ ಬಾಬಾ ಬುಡನ್ ಗಿರಿ ದರ್ಗಾದ ಮುಖ್ಯಸ್ಥರಾದ ಸಜ್ಜಾದ್ – ಎ – ನಶೀನ್ ಹಾಗೂ ಎಸ್.ಡಿ.ಪಿ.ಐ ರಾಜ್ಯ ನಾಯಕರು ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದು, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ಗೋರಿಗಳನ್ನು ಸ್ಥಳಾಂತರಿಸುವುದಾಗಲಿ, ಹಿಂದೂ ಅರ್ಚಕರನ್ನು ನೇಮಿಸುವ ಬಗ್ಗೆಯಾಗಲಿ ತೀರ್ಮಾನ ನೀಡಿಲ್ಲ. ಆದರೂ ಸಚಿವರು ಸಂಘರ್ಷಕ್ಕೆ ಎಡೆಮಾಡಿಕೊಡುವಂತಹ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.
ಸುನಿಲ್ ಕುಮಾರ್ ನ್ಯಾಯಾಲಯದ ಆದೇಶವನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳದೆ ತರಾತುರಿಯಲ್ಲಿ ಬಾಬಾ ಬುಡನ್ ಗಿರಿಗೆ ಬಂದು ಗೋರಿಗಳನ್ನು ತೆರವುಗೊಳಿಸಬೇಕು ಎಂದು ಹೇಳುವ ಮೂಲಕ ಎರಡು ಸಮುದಾಯಗಳ ಮಧ್ಯೆ ಸಂಘರ್ಷ ಉಂಟು ಮಾಡಲು ಪ್ರಯತ್ನಿಸಿದ್ದಾರೆ. ನ್ಯಾಯಾಲಯದ ತೀರ್ಪಿನಲ್ಲಿ ಈ ರೀತಿಯ ಆದೇಶವಿಲ್ಲ ಮತ್ತು ಸಚಿವರ ಹೇಳಿಕೆ ಸುಳ್ಳಿನಿಂದ ಕೂಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸುನಿಲ್ ಕುಮಾರ್ ಸಮಸ್ಯೆಯನ್ನು ಪರಿಹಾರ ಮಾಡುವ ಪ್ರಯತ್ನ ಮಾಡಬೇಕೇ ಹೊರತು, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಅವರು ಬಜರಂಗದಳದ ಅಧ್ಯಕ್ಷರಾಗಿದ್ದಾಗ ನೀಡುತ್ತಿದ್ದ ಹೇಳಿಕೆಗಳಂತೆ ಈಗ ಸಚಿವನಾಗಿ ನೀಡಬಾರದು. ಬದಲಾಗಿ ಅವರ ಜವಾಬ್ದಾರಿಯನ್ನು ಅರಿತು ಹೇಳಿಕೆ ನೀಡಬೇಕು. ಬಾಬಾಬುಡನ್ ಗಿರಿ ಪ್ರಕರಣದ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಎಸ್.ಡಿ.ಪಿ.ಐ ನಿರ್ಧರಿಸಿದೆ ಎಂದು ಅಪ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.