ಬೆಂಗಳೂರು ಏ.೦೯: ಧಾರವಾಡ ನಗರದ ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಬೇಕೆಂದು ಒತ್ತಾಯಿಸಿ, ಕಳೆದ ೧೫ ವರುಷಗಳಿಂದ ನುಗ್ಗಿಕೇರಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ನಬೀಸಾಬ್ ಎಂಬವರ ಅಂಗಡಿಗೆ ಶ್ರೀ ರಾಮ ಸೇನೆಯ ಗೂಂಡಾ ಕರ್ಯರ್ತರು ದಾಳಿ ಮಾಡಿ ೫ ಕ್ವಿಂಟಲ್ ಕಲ್ಲಂಗಡಿಗಳನ್ನು ಒಡೆದು ಹಾಕಿ ನಾಶ ಮಾಡಿರುವುದು ಖಂಡನರ್ಹ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ ಎಂದು ಸೋಷಿಯಲ್ ಡೆಮಾಕ್ರಟಿಕ್ ಪರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಂಘಪರಿವಾರ, ಶ್ರೀರಾಮ ಸೇನೆಯ ಗೂಂಡಾಗಳು ನಡೆಸಿದ ಅಮಾನವೀಯ ಕೃತ್ಯದಿಂದ ಬಡ ವ್ಯಾಪಾರಿ ನಬೀ ಸಾಬ್ ಅಪಾರ ನಷ್ಟಕೊಳಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಅಲ್ಲಿನ ಪೊಲೀಸ್ ವ್ಯವಸ್ಥೆ ಮೌನ ವಹಿಸಿ ದಾಳಿಕೋರರನ್ನು ಇನ್ನೂ ಬಂಧಿಸದೆ ಕಣ್ಣಾಮುಚ್ಚಾಲೆ ಆಡುತ್ತಿರುವುದು ದುರಂತ. ರಾಜ್ಯದಲ್ಲಿ ಬೊಮ್ಮಾಯಿ ಸರಕಾರ ಬಂದ ಮೇಲಂತು ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು, ಗೃಹ ಸಚಿವರು ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು, ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.ಮುಖ್ಯಮಂತ್ರಿಗಳ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆ, ಕೆಲವು ಶಾಸಕರ, ಸಂಸದರ ದ್ವೇಷ ಹೇಳಿಕೆ ಈ ದುಷ್ಕೃತ್ಯಗಳು ಹೆಚ್ಚಲು ಕಾರಣವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪರ್ಣ ಕುಸಿದು ಹೋಗಿದೆ. ಸರಕಾರ ಸಂಘಪರಿವಾರದ ಕೇಸುಗಳನ್ನು ಹಿಂದೆಗೆದುಕೊಂಡು ಇಂತಹ ಕುಕೃತ್ಯ ನಡೆಸಲು ಹೆಚ್ಚು ಪ್ರಚೋದನೆ ನೀಡುತ್ತಿದೆ. ಇದರ ಮುಂದುವರಿದ ಭಾಗವಾಗಿ ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕೃತ್ಯಗಳಿಗೆ ಸಂಘಪರಿವಾರ, ಶ್ರೀ ರಾಮ ಸೇನೆಯಂತಹ ಸಂಘಟನೆಗಳು ಕೈ ಹಾಕುತ್ತಿದ್ದಾರೆ.
ಧಾರವಾಡದಲ್ಲಿ ಒಬ್ಬ ವೃದ್ಧ ಎನ್ನುವುದನ್ನೂ ಪರಿಗಣಿಸದೆ ಈ ರೀತಿಯ ಅಮಾನವೀಯ,ಅತೀ ಕ್ರೂರ ಕೃತ್ಯವನ್ನು ಎಸಗಿದ್ದಾರೆ. ಆದ್ದರಿಂದ ಧಾರವಾಡದ ಪೊಲೀಸ್ ಆಯುಕ್ತರು ಕೂಡಲೇ ಎಚ್ಚೆತ್ತು ಕೊಂಡು ಕೃತ್ಯ ಎಸಗಿದ ಶ್ರೀ ರಾಮ ಸೇನೆಯ ಗೂಂಡಾಗಳ ಮೇಲೆ ಕಠಿಣ ಕೇಸು ದಾಖಲಿಸಿ ಬಂಧಿಸ ಬೇಕು. ಸಂತ್ರಸ್ತ ವ್ಯಾಪಾರಿಗಾದ ನಷ್ಟವನ್ನು ಜಿಲ್ಲಾಡಳಿತ ಭರಿಸಬೇಕು.ರಾಜ್ಯ ಸರಕಾರ ತಕ್ಷಣವೆಂಬಂತೆ ಮುಸ್ಲಿಂ ವ್ಯಾಪಾರಿಗಳ ರಕ್ಷಣೆಯನ್ನು ಖಾತರಿಪಡಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ಒತ್ತಾಯಿಸುತ್ತದೆ.
