ಕೋಮು ವಿದ್ವೇಷಕ್ಕೆ ಬಲಿಯಾದ ಫಾಝಿಲ್, ಮಸೂದ್, ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಗಳಿಗೆ ಪರಿಹಾರ ಘೋಷಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಇದೇ ಕಾರಣಕ್ಕೆ ಕೊಲೆಯಾದ ಇತರರ ಕುಟುಂಬಗಳಿಗೂ ಪರಿಹಾರ ನೀಡಿ – ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ
ಬೆಂಗಳೂರು, 17 ಜೂನ್ 2023: ಕೋಮು ದ್ವೇಷದ ಕಾರಣಕ್ಕೆ ಸಂಘ ಪರಿವಾರದ ಗೂಂಡಾಗಳಂದ ಹತ್ಯೆಯಾದ ಫಾಝಿಲ್, ಮಸೂದ್, ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಮು ದ್ವೇಷದ ಕಾರಣಕ್ಕೆ ಇವರ ಕೊಲೆ ನಡೆದ ದಿನದಿಂದಲೇ ಎಸ್‌ಡಿಪಿಐ ಪಕ್ಷ ಇವರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಅದರಲ್ಲೂ ವಿಶೇಷವಾಗಿ ಕೇವಲ ಪ್ರವೀಣ್ ನೆಟ್ಟಾರು ಮತ್ತು ಹರ್ಷ ಕುಟುಂಬಗಳಿಗೆ ಮಾತ್ರ ಪರಿಹಾರ ಘೋಷಿಸಿದ ಕೋಮುವಾದಿ ಬಿಜೆಪಿ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಎಸ್‌ಡಿಪಿಐ ಧ್ವನಿ ಎತ್ತಿತ್ತು. ಕೋಮು ದ್ವೇಷದ ಕಾರಣಕ್ಕೆ ಕೊಲೆಯಾದ ಎಲ್ಲರಿಗೂ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನು ನಿರಂತರವಾಗಿ ಮಾಡುತ್ತಲೇ ಬಂದಿತ್ತು. ಈಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇವರಿಗೆ ಪರಿಹಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರಷ್ಟೇ ಅಲ್ಲದೆ ಮಂಡ್ಯದ ಇದ್ರೀಶ್, ಬೆಳಗಾವಿಯ ಶಬಾಜ್, ನರಗುಂದದ ಸಮೀರ್, ಬೆಳ್ತಂಗಡಿಯ ದಿನೇಶ್ ಕನ್ಯಾಡಿ ಮತ್ತು ಮೈಸೂರಿನ ಸದಾಖತ್ ಅವರೂ ಸಹ ಕೋಮು ದ್ವೇಷದ ಕಾರಣಕ್ಕೆ ಕೊಲೆಯಾಗಿದ್ದಾರೆ. ಅವರ ಕುಟುಂಬಗಳಿಗೂ ಪರಿಹಾರ ನೀಡಬೇಕೆಂದು ಮಜೀದ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.