ಖ್ಯಾತ ಬಹು ಭಾಷ ನಟ ಪ್ರಕಾಶ್ ರೈಗೆ ಇಡಿ ಸಮ್ಮನ್ಸ್: ಸರಕಾರವನ್ನು ಟೀಕೆ ಮಾಡುವವರನ್ನು ಹತ್ತಿಕ್ಕುವ ಅಜೆಂಡಾದ ಮುಂದುವರಿದ ಭಾಗ: ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್.ಡಿ.ಪಿ.ಐ
ಬೆಂಗಳೂರು, 24 ನವೆಂಬರ್ 2023: ಬಿಜೆಪಿ ಮತ್ತು ಮೋದಿ ಸರ್ಕಾರವನ್ನು ಟೀಕೆ ಮಾಡುವವರನ್ನು ಹತ್ತಿಕ್ಕುವ ಅಜೆಂಡಾದ ಮುಂದುವರಿದ ಭಾಗವಾಗಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಇಡಿ ಯನ್ನು ಚೂ ಬಿಡಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಲತೀಫ್ ಪುತ್ತೂರು ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಆರೋಪಿಸಿದ್ದಾರೆ.
ಯಾವುದೇ ಒಂದು ಕಂಪನಿ ಒಬ್ಬ ಪ್ರಖ್ಯಾತ ವ್ಯಕ್ತಿಯನ್ನು ತಮ್ಮ ಕಂಪನಿಯ ಬ್ರಾಂಡ್ ಅಂಬಾಸಡರ್ ಆಗುವಂತೆ ವಿನಂತಿಸಿದಾಗ ಆ ಪ್ರಖ್ಯಾತ ವ್ಯಕ್ತಿ ಒಪ್ಪಿತ ಮೊತ್ತಕ್ಕೆ ಕಂಪನಿಯ ಪರವಾಗಿ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ಕಂಪನಿಯ ಆಗು ಹೋಗುಗಳಲ್ಲಿ ಅವರ ಭಾಗವಹಿಸುವಿಕೆ ಅಲ್ಲಿಗೇ ನಿಲ್ಲುತ್ತದೆ. ಆದರೆ ಪ್ರಕಾಶ್ ರೈ ರನ್ನು ಚಿನ್ನದ ಚೀಟಿ ಕಂಪನಿಯೊಂದರಲ್ಲಿ ನಡೆದಿದೆ ಎನ್ನಲಾದ ಮೋಸಕ್ಕೆ ಜವಾಬ್ದಾರನ್ನಾಗಿ ಮಾಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿರುವ ಅಬ್ದುಲ್ ಲತೀಫ್ ಅವರು, ಇದು ದ್ವೇಷ ಸಾಧನೆಯಲ್ಲದೆ ಬೇರೇನಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸೂತ್ರವನ್ನು ಬಳಸುವುದಾದರೆ, ಈ ದೇಶದಲ್ಲಿ ಗುಟ್ಕಾ ತಿನ್ನುವುದರಿಂದ ಪ್ರತೀ ವರ್ಷ ಲಕ್ಷಾಂತರ ಮಂದಿ ಸಾಯುತ್ತಾರೆ. ಅದಕ್ಕೆ ಗುಟ್ಕಾ ಕಂಪನಿಗಳ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಅಜಯ್ ದೇವಗನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಮುಂತಾದ ನಟರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿರುವ ಲತೀಫ್ ಅವರು, ಪ್ರಕಾಶ್ ರೈ ಅವರು ಮೋದಿ, ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ಧ್ವನಿ ಎತ್ತುತ್ತಾರೆ ಎನ್ನುವ ಒಂದೇ ಕಾರಣಕ್ಕೆ ಅವರ ವಿರುದ್ಧ ಈ ಷಡ್ಯಂತ್ರ ಹೂಡಲಾಗಿದೆ. ಮೋದಿ ಸರ್ಕಾರ ಇಂತಹ ಕೀಳುಮಟ್ಟದ ರಾಜಕೀಯದಿಂದ ಹೊರಬರಬೇಕು ಎಂದು ಲತೀಫ್ ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.