ಸಂಸತ್ತಿನ ಒಳಗೆ ಮತ್ತು ಹೊರಗೆ ಇಂದು ನಡೆದಿರುವ ಬಣ್ಣದ ಸ್ಪೋಟಕಗಳ ಘಟನೆ ಗಂಭೀರ ಭದ್ರತಾ ಲೋಪ. ಈ ಪ್ರಕರಣದಲ್ಲಿ ದಾಳಿಕೋರರಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಬೇಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ
ಬೆಂಗಳೂರು, 13 ಡಿಸೆಂಬರ್ 2023: ಸಂಸತ್ತಿನ ಮೇಲೆ 2001ರಲ್ಲಿ ನಡೆದ ಭಯೋತ್ಪಾದಕ ದಾಳಿಯ 22 ವರ್ಷಗಳ ಶೋಕಾಚರಣೆಯ ದಿನವೇ ಇಂದು ಸಂಸತ್ತಿನ ಒಳಗೆ ಮತ್ತು ಹೊರಗೆ ನಡೆದಿರುವ ಬಣ್ಣದ ಸ್ಪೋಟಕಗಳ ಘಟನೆ ಗಂಭೀರ ಭದ್ರತಾ ಲೋಪವಾಗಿದ್ದು ಇದು ದೇಶ ಸುರಕ್ಷಿತವಾಗಿದೆಯೆ ಎಂದು ನಾವೆಲ್ಲ ಕೇಳಿಕೊಳ್ಳಬೇಕಾದ ಸ್ಥಿತಿ ನಿರ್ಮಾಣ ಮಾಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಆತಂಕ ಹೊರಹಾಕಿದ್ದಾರೆ.
ಒಂದೆಡೆ ಭಯೋತ್ಪಾದಕ ದಾಳಿಗೆ 22 ವರ್ಷದ ಜೊತೆಗೆ, ಖಾಲಿಸ್ತಾನಿ ಉಗ್ರ ಸಂಘಟನೆ ಇದೇ ದಿನ ಭಾರತದ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಬೆದರಿಕೆಯನ್ನೂ ಹಾಕಿತ್ತು. ಈ ಹಿನ್ನಲ್ಲೆಯಲ್ಲಿ ನೋಡಿದಾಗಲೂ ಇಂದು ಸಂಸತ್ತಿಗೆ ಬಿಗಿ ಭದ್ರತೆ ಇರಬೇಕಿತ್ತು. ಆದರೆ ಇಷ್ಟು ದೊಡ್ಡ ಮಟ್ಟದ ಲೋಪ ಆಗಿರುವುದು ಆತಂಕಕಾರಿ ಎಂದು ಮಜೀದ್ ತಿಳಿಸಿದ್ದಾರೆ.
ಸಂಸತ್ತಿನ ಒಳಗೆ ಹೋಗಬೇಕಾದರೆ ಸಂಸದರಿಗೇ ಮೂರು ಹಂತದ ತಪಾಸಣೆ ಇದೆ. ಇನ್ನು ಸಾಮಾನ್ಯರಿಗೆ ಐದು ಹಂತದ ತಪಾಸಣೆ ಇದೆ. ಹೀಗಿದ್ದೂ ಇಬ್ಬರು ಅಪರಿಚಿತ ವ್ಯಕ್ತಿಗಳು “ಕಲರ್ ಸ್ಮೋಕ್ ಬ್ಲಾಸ್ಟ್” ವಸ್ತುಗಳ ಜೊತೆ ಸಂಸತ್ತಿನ ಒಳಗೆ ಪ್ರವೇಶ ಪಡೆದಿದ್ದಾರೆ ಎಂದರೆ ಇದು ಅದು ಅತಿ ದೊಡ್ಡ ಭದ್ರತಾ ಲೋಪ. ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಇನ್ನು ಸಂಸತ್ತಿನ ಒಳಗೆ ಹೋಗುವಲ್ಲಿ ಯಶಸ್ವಿಯಾದ ಇಬ್ಬರು ವ್ಯಕ್ತಿಗಳು ಮೈಸೂರು – ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರ ಮೂಲಕ ಪಡೆದಿದ್ದ ಪಾಸ್ ಹೊಂದಿದ್ದರು. ಇದರ ಬಗ್ಗೆ ಪ್ರತಾಪ್ ಸಿಂಹ ಅವರ ವಿಚಾರಣೆ ನಡೆಯಬೇಕು ಮತ್ತು ವಿಚಾರಣೆ ಮುಗಿಯುವರೆಗೂ ಅವರಿಗೆ ಸಂಸತ್ತಿನ ಕಲಾಪಕ್ಕೆ ಹಾಜರಾಗಲು ಅವಕಾಶ ಕೊಡಬಾರದು ಎಂದು ಮಜೀದ್ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಇಡೀ ಪ್ರಕರಣ ದೇಶದ ಅತಿ ದೊಡ್ಡ ಪಂಚಾಯತ್ ಎಂದು ಕರೆಸಿಕೊಳ್ಳುವ, ಪ್ರಜಾಪ್ರಭುತ್ವದ ಪವಿತ್ರ ಸ್ಥಾನವಾದ ಸಂಸತ್ತಿನ ಗೌರವ, ಮರ್ಯಾದೆಗೆ ಚ್ಯುತಿಯಾಗಿದೆ. ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಜೀದ್ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.