ಗಾಜಾದಲ್ಲಿ ತೀವ್ರ ಹಸಿವಿನಿಂದ 85 ಮಕ್ಕಳೂ ಸೇರಿ 127 ಅಮಾಯಕ ಪ್ಯಾಲೆಸ್ಟೈನಿಯನ್ನರ ಸಾವಿನ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ ಅವರು ತೀವ್ರ ದುಃಖ ಮತ್ತು ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಯುದ್ಧದ ಸ್ವಾಭಾವಿಕ ಪರಿಣಾಮವಲ್ಲ, ಬದಲಾಗಿ ಉದ್ದೇಶಪೂರ್ವಕ ಕ್ರೂರತೆ ಮತ್ತು ದಂಡನೆಯ ಫಲವಾಗಿದೆ. ಇಸ್ರೇಲ್ ವಿಧಿಸಿರುವ ನಿರ್ಬಂಧ ಮತ್ತು ತೀವ್ರ ಸೈನಿಕ ದಾಳಿಯಿಂದ ಗಾಜಾ ಒಂದು ಬಯಲು ಸಮಾಧಿಯಾಗಿ ಪರಿಣಮಿಸಿದೆ. ಜಗತ್ತು ಇದರಿಂದ ವಿಮುಖವಾಗಬಾರದು. ಮಕ್ಕಳನ್ನು ಉದ್ದೇಶಪೂರ್ವಕವಾಗಿ ಆಹಾರವಿಲ್ಲದಂತೆ ಕೊಲ್ಲುವುದು ಇಡೀ ಜಗತ್ತಿನ ಮಾನವೀಯತೆ ಆತ್ಮಕ್ಕೆ ಕಳಂಕವಾಗಿದ್ದು, ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಇದರ ವಿರುದ್ಧ ತುರ್ತು ಮತ್ತು ದೃಢವಾದ ಕ್ರಮದ ಅಗತ್ಯವಿದೆ.
2023 ಅಕ್ಟೋಬರ್ 7ರಿಂದ ಇಸ್ರೇಲ್ ಗಾಜಾದ ಮೇಲೆ ಸಂಪೂರ್ಣ ನಿರ್ಬಂಧ ಹೇರಿದ್ದು, ಆಹಾರ, ನೀರು, ಇಂಧನ ಮತ್ತು ವೈದ್ಯಕೀಯ ನೆರವಿನ ಎಲ್ಲಾ ಮಾರ್ಗಗಳನ್ನು ಕಡಿದುಹಾಕಿದೆ. ಇದರ ಪರಿಣಾಮವಾಗಿ 2.1 ಮಿಲಿಯನ್ ಪ್ಯಾಲೆಸ್ಟೈನಿಯನ್ನರು ನಿರ್ಗತಿ ಮತ್ತು ನಾಶದ ಸ್ಥಿತಿಗೆ ತಲುಪಿದ್ದಾರೆ. ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯದ ಪ್ರಕಾರ, ಈ ಅವಧಿಯಲ್ಲಿ 52,000ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗಾಜಾದ ಆಸ್ಪತ್ರೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಸ್ಥಬ್ದವಾಗಿದ್ದು ಯುದ್ಧದಿಂದಾಗುತ್ತಿರುವ ಗಾಯಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಆಘಾತಕಾರಿ ಬೆಳವಣಿಗೆಯಲ್ಲಿ, ಸಹಾಯ ವಿತರಣಾ ಕೇಂದ್ರದ ಮೇಲೆ ನಡೆದ ಗುಂಡಿಯ ದಾಳಿಯಲ್ಲಿ 1,000 ಕ್ಕೂ ಸಾವನ್ನಪ್ಪಿರುವುದು ವರದಿಯಾಗಿದೆ. ಈ ಕೇಂದ್ರಗಳನ್ನು ಸಹಾಯ ಕೇಂದ್ರಗಳ ಬದಲಾಗಿ ಗಾಜಾ ಮೇಲೆ ನಿಯಂತ್ರಣ ಸಾಧಿಸಲು ಒಂದು ಸಾಧನವಾಗಿ ಬಳಸಲಾಗುತ್ತಿದೆ ಎಂಬ ಆರೋಪ ಇದೆ. ಗಾಜಾ ಹ್ಯೂಮನೆಟೇರಿಯನ್ ಫೌಂಡೇಶನ್ ಕೂಡ ಈ ಯೋಜಿತ ನೀಚ ಷಡ್ಯಂತ್ರದ ಭಾಗವಾಗಿರಬಹುದು ಎಂಬ ಗಂಭೀರ ಆರೋಪ ಎದುರಿಸುತ್ತಿದೆ.
ಈ ನಡುವೆ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳೇನು ಮೌನವಾಗಿಲ್ಲ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಡಿಸೆಂಬರ್ 2024ರ ವರದಿಯಲ್ಲಿ ಈ ಕೃತ್ಯಗಳನ್ನು ಗೆನೊಸೈಡ್ (ನರಹತ್ಯೆ) ಎಂದು ಗುರುತಿಸಿದೆ. 2024 ಜನವರಿಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವೂ ಗಾಜಾದ ಪ್ಯಾಲೆಸ್ಟೈನಿಯನ್ನರ ವಿರುದ್ಧ ನರಮೇಧ ನಡೆದಿದೆ ಎಂದು ದೃಢಪಡಿಸಿದೆ. ಆದರೂ ಅಲ್ಲಿನ ಜನರಿಗೆ ಸಹಾಯ ನಿರ್ಬಂಧಿತವಾಗಿದೆ. ಸಾವಿರಾರು ಟನ್ ಆಹಾರ, ಔಷಧಿ ಗಾಜಾ ಗಡಿಗಳಲ್ಲೇ ಕೊಳೆಯುತ್ತಿದೆ. ರಫಾ ನಗರದಲ್ಲಿ ನಿರ್ಮಿಸಲಾಗುತ್ತಿರುವ “ಮಾನವತಾವಾದಿ ನಗರ”ವನ್ನು ಬಲಾತ್ಕಾರ ವಲಸೆಯ ತಂತ್ರದ ಭಾಗವಾಗಿ ಹಲವರು ಭಾವಿಸುತ್ತಿದ್ದಾರೆ. ಇದು ಇತ್ತೀಚಿನ ಮಾನವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳನ್ನು ನೆನಪಿಸಿಸುತ್ತದೆ.
ಈ ಸಂಕಟದ ಘಟ್ಟದಲ್ಲಿ ಜಾಗತಿಕ ಶಕ್ತಿಗಳ ನಿಷ್ಕ್ರಿಯತೆ ಆಘಾತಕಾರಿಯಾಗಿದೆ. ಅಮೆರಿಕ ಸಂಯುಕ್ತ ರಾಷ್ಟ್ರ ಸಂಧಾನಕ್ಕೆ ಆಗ್ರಹಿಸುವ ನಿರ್ಣಯಗಳನ್ನು ನಿರಂತರವಾಗಿ ವಿಟೋ ಮಾಡುತ್ತಾ, ಇಸ್ರೇಲ್ಗೆ ಸೇನೆಗೆ ಬಿಲಿಯನ್ಗಟ್ಟಲೆ ನೆರವು ನೀಡುತ್ತಲೇ ಇದೆ. ಜರ್ಮನಿ ಕೂಡ 2024ರಲ್ಲಿ $100 ಮಿಲಿಯನ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ಗೆ ನೀಡಿದ್ದು, ತನ್ನ ಹಿಂದಿನ ಕ್ರೌರ್ಯಕ್ಕೆ ಪಶ್ಚಾತಾಪ ಇದು ಎಂದು ತನ್ನ ಅಪರಾಧವನ್ನು ಸಮರ್ಥಿಸುತ್ತಿದೆ. ಜೊತೆಗೆ, ಪ್ಯಾಲೆಸ್ಟೈನ್ ಪರ ಧ್ವನಿಗಳನ್ನು ದಮನಿಸಲು, ಇಸ್ರೇಲ್ ವಿರುದ್ಧದ ಎಲ್ಲ ಟೀಕೆಗಳನ್ನು ಯೆಹೂದಿ ವಿರೋಧವೆಂಬಂತೆ ಬಣ್ಣಿಸಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಇದು ಅಂತರರಾಷ್ಟ್ರೀಯ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಮತ್ತು ಇಸ್ರೇಲ್ ನಡೆಸುತ್ತಿರುವ ಅಪರಾಧಗಳಿಗೆ ಇನ್ನಷ್ಟು ನಿರ್ಭಿತಿಯ ಭಾವನೆ ಒದಗಿಸುತ್ತಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷ ಇಸ್ರೇಲ್ನ ಗಾಜಾ ನಿರ್ಬಂಧವನ್ನು ತಕ್ಷಣ ಮತ್ತು ಏಕೈಕ ಆಯ್ಕೆ ಎಂಬಂತೆ ಅಂತ್ಯಗೊಳಿಸಲು, ಸಂಯುಕ್ತ ರಾಷ್ಟ್ರದ ನೇತೃತ್ವದ ಮಾನವೀಯ ನೆರವಿಗೆ ಮಾರ್ಗಗಳನ್ನು ಸಂಪೂರ್ಣವಾಗಿ ತೆರೆಯಲು ಆಗ್ರಹಿಸುತ್ತದೆ. ರಕ್ತಪಾತವನ್ನು ತಕ್ಷಣದಿಂದಲೇ ನಿಲ್ಲಿಸಲು ಶಾಶ್ವತ ಸಂಧಾನ ಜಾರಿಗೆ ತರುವ ಅಗತ್ಯವಿದೆ. ಅಂತಾರಾಷ್ಟ್ರೀಯ ಸಮುದಾಯ ತಮ್ಮ ಕಾನೂನುಬದ್ಧ ಹಾಗೂ ನೈತಿಕ ಜವಾಬ್ದಾರಿಗಳನ್ನು ನಿಭಾಯಿಸಿ, ಅಂತಾರಾಷ್ಟ್ರೀಯ ನ್ಯಾಯಾಲಯದ ನರಹತ್ಯೆ ಆರೋಪಕ್ಕೆ ಬೆಂಬಲ ನೀಡಿ, ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ತನಿಖೆಗೆ ಸಹಕಾರ ನೀಡಬೇಕು. ಪ್ಯಾಲೆಸ್ಟೈನ್ ರೆಡ್ ಕ್ರೆಸೆಂಟ್ ಸೊಸೈಟಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕರ್ತರು ಸೇರಿ ಎಲ್ಲಾ ನಾಗರಿಕರಿಗೆ ತಕ್ಷಣ ರಕ್ಷಣೆ ಒದಗಿಸಬೇಕು. ಜೊತೆಗೆ, ಸ್ವತಂತ್ರ ಪತ್ರಿಕೋದ್ಯಮದ ದಮನವನ್ನು ತಕ್ಷಣವೇ ನಿಲ್ಲಿಸಿ, ಗಾಜಾದ ವಾಸ್ತವಿಕತೆಗಳನ್ನು ದಾಖಲಿಸಲು ಪತ್ರಕರ್ತರಿಗೆ ಪ್ರವೇಶ ಒದಗಿಸಬೇಕು.
ಈ ಸಂಕಷ್ಟದ ಸಮಯದಲ್ಲಿ ಭಾರತ ಮತ್ತು ಜಾಗತಿಕ ದಕ್ಷಿಣ ದೇಶಗಳು ಮೌನ ಮುರಿಯಬೇಕು. ಅವರು ಹೊಣೆಗಾರಿಕೆಗೆ ಒತ್ತಾಯಿಸಬೇಕು. ಇಸ್ರೇಲ್ ಮೇಲೆ ನಿರ್ಬಂಧಗಳನ್ನು ಹೇರಬೇಕು ಮತ್ತು ಮಾನವ ಹಕ್ಕು ಕಾನೂನುಗಳ ಮೂಲಭೂತ ಮೌಲ್ಯಗಳನ್ನು ಪುನರ್ಸ್ಥಾಪಿಸಬೇಕು. ನ್ಯಾಯ ಪ್ರಧಾನವನ್ನು ಇನ್ನಷ್ಟು ವಿಳಂಬ ಮಾಡಬಾರದು. ಜಗತ್ತು ದಿಟ್ಟವಾಗಿ, ತ್ವರಿತವಾಗಿ ಮತ್ತು ನೈತಿಕ ಸ್ಪಷ್ಟತೆಯಿಂದ ನಡೆದು, ಗಾಜಾದ ಹಸಿವಿಗೆ ಸ್ಪಂದಿಸಬೇಕು. ಅವರ ಮೇಲೆ ಹೇರಲಾಗಿರುವ ನಿರ್ಬಂಧ ತೊಡೆದುಹಾಕಿ ಪ್ಯಾಲೆಸ್ಟೈನ್ ಜನರ ಗೌರವದ ಬದುಕನ್ನು ಮರುಸ್ಥಾಪಿಸಬೇಕು.