ಬದಲಾವಣೆ ಎಂದರೆ ಯಾರೋ ಒಬ್ಬ ನಾಯಕ ಬಂದು ಮಾಡುವ ಕೆಲಸವಲ್ಲ, ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ತನ್ನ ಕೊಡುಗೆಯನ್ನು ನೀಡಿದಾಗ ಮಾತ್ರ ಸಾಧ್ಯವಾಗುವ ಶಕ್ತಿ. ಅಪ್ಸರ್ ಕೊಡ್ಲಿಪೇಟೆ
ಹೊಸಕೋಟೆ : ಸೆಪ್ಟೆಂಬರ್-11 :ಇಂದು ಹೊಸಕೋಟೆಯಲ್ಲಿ ನಡೆದ ಎಸ್ಡಿಪಿಐ ಪಕ್ಷದ ನಾಯಕರ ಸಭೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು ಭಾಗವಹಿಸಿ “ಬದಲಾವಣೆ ಎಂದರೆ ಯಾರೋ ಒಬ್ಬ ನಾಯಕ ಬಂದು ಮಾಡುವ ಕೆಲಸವಲ್ಲ. ಬದಲಾವಣೆ ಎಂದರೆ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ತನ್ನ ಕೊಡುಗೆಯನ್ನು ನೀಡಿದಾಗ ಮಾತ್ರ ಸಾಧ್ಯವಾಗುವ ಶಕ್ತಿ.
ಸಮಾಜ ಪರಿವರ್ತನೆಗೆ ಕೇವಲ ಕನಸುಗಳು ಸಾಕಾಗುವುದಿಲ್ಲ, ಕ್ರಿಯಾಶೀಲತೆ ಅಗತ್ಯ. ನಾವು ನೀಡುವ ಪ್ರತಿಯೊಂದು ಪ್ರಯತ್ನ, ಪ್ರತಿಯೊಂದು ಬೆವರುತೊಟ್ಟು, ಪ್ರತಿಯೊಂದು ಮಾತು – ಇವುಗಳು ಸೇರಿ ಭವಿಷ್ಯದ ಉತ್ತಮ ಸಮಾಜವನ್ನು ರೂಪಿಸುತ್ತವೆ.
ಇಂದು ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಹಕ್ಕುಗಳನ್ನು ಕಾಪಾಡುವುದು ನಮ್ಮ ಧರ್ಮವೂ ಹೌದು, ಜವಾಬ್ದಾರಿಯೂ ಹೌದು. ನಮ್ಮ ಕಡೆಯಿಂದ ಬರುವ ಸಣ್ಣ ಕೊಡುಗೆಯೂ ದೊಡ್ಡ ಬದಲಾವಣೆಗೆ ಆಧಾರವಾಗಬಹುದು.
ಆದರೆ ಪ್ರಶ್ನೆ ಏಳಬೇಕು – ‘ನಾನು ಸಮಾಜಕ್ಕಾಗಿ ಏನು ಮಾಡುತ್ತಿದ್ದೇನೆ?’
ಈ ಪ್ರಶ್ನೆ ಪ್ರತಿಯೊಬ್ಬರ ಹೃದಯದಲ್ಲಿ ಮೂಡಿದಾಗ, ನಾವು ನಿಜವಾದ ಪರಿವರ್ತನೆಯ ಹಾದಿ ಹಿಡಿದಂತೆ.”
“ಸಮಾಜ ಪರಿವರ್ತನೆಗೆ ಪ್ರತಿಯೊಬ್ಬರ ಪಾತ್ರ” ಎಂಬ ವಿಷಯದ ಕುರಿತು ಪ್ರಭಾವಶೀಲವಾಗಿ ಮಾತನಾಡಿದರು.
ಅವರು ಹೇಳಿದರು:
“ಸಮಾಜದಲ್ಲಿ ಬದಲಾವಣೆಯ ಕನಸು ಕಂಡು ಕುಳಿತುಕೊಳ್ಳುವುದರಿಂದ ಪ್ರಯೋಜನವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಈ ಹಾದಿ ಸುಲಭವಾಗಿಲ್ಲ, ಆದರೆ ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನ್ಯಾಯ, ಸಮಾನತೆ ಮತ್ತು ಸಹೋದರತ್ವದ ಸ್ಥಾಪನೆಗೆ ಶ್ರಮ, ಬದ್ಧತೆ ಮತ್ತು ನಂಬಿಕೆ ಅತ್ಯಂತ ಮುಖ್ಯ. ಎಸ್ಡಿಪಿಐ ಕಾರ್ಯಕರ್ತರು ತಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಸಮಾಜಮುಖಿ ಹೋರಾಟಗಳಿಗೆ ಸಮರ್ಪಿಸಬೇಕು.” ಎಂದು ಕರೆ ನೀಡಿದರು.
ಈ ಸಭೆಯಲ್ಲಿ ನಿರುದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಸ್ಥಳೀಯ ಅಭಿವೃದ್ಧಿ ಸಂಬಂಧಿತ ವಿಷಯಗಳ ಕುರಿತೂ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಯ್ತಿಯಾಜ್ ಅವರು ಸಂಘಟನಾ ಬಲವರ್ಧನೆ ಹಾಗೂ ನಿಧಿ ಸಂಗ್ರಹಣೆಯ ಅಗತ್ಯತೆಯನ್ನು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ಅಡ್ವಕೇಟ್ ವಿಜಯನ್, ರೆಹೆಬರ್ ಬೇಗ್, ಪ್ರಧಾನ ಕಾರ್ಯದರ್ಶಿಗಳಾದ ನಯೀಮ್, ಕಾರ್ಯದರ್ಶಿ ಆಸೀಫ್ ಅಕ್ರಮ್, ವಿಮೆನ್ ಇಂಡಿಯಾ ಮೂವೈಂಟ್ ಜಿಲ್ಲಾ ನಾಯಕಿಯರೂ ಸೇರಿದಂತೆ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದ ನಾಯಕರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು