ಶ್ವೇತ ಪತ್ರ ಹೊರಡಿಸಿ – ಎಸ್.ಡಿ.ಪಿ.ಐ
2025-26 ನೇ ಸಾಲಿನ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ ಮೊತ್ತವನ್ನು ಮೀಸಲಿಟ್ಟು ಅನೇಕ ಯೋಜನೆಗಳನ್ನು ಘೋಷಿಸಿದರು. ಸದರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮೀಸಲಿಟ್ಟ ಮೊತ್ತವನ್ನು ಬಿಡುಗಡೆ ಮಾಡಿಲ್ಲದಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಅಲ್ಪಸಂಖ್ಯಾತರ ಕಲ್ಯಾಣ * ಇಲಾಖೆ ಸಹ ಆಮೆ ಗತಿಯಲ್ಲಿ ತನ್ನ ಕೆಲಸವನ್ನು ಮಾಡುತ್ತಿದೆ. ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡಿದ ಆಶ್ವಾಸನೆಗಳು ಕೇವಲ ಆಶ್ವಾಸನೆಗಳಾಗಿ ಉಳಿದುಕೊಂಡಿವೆ. ಅಲ್ಪಸಂಖ್ಯಾತರ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯವನ್ನು ಸಹಿಸಲಾಗದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಖರ್ಚು ಮಾಡಿದ್ದರೆ, ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆ, ಬಹುಪಯೋಗಿ ಸಭಾಂಗಣಗಳ ನಿರ್ಮಾಣ, ಮಹಿಳೆಯರಿಗಾಗಿ ಪದವಿ ಪೂರ್ವ ಕಾಲೇಜು ಸ್ಥಾಪನೆ, ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ವಿಶೇಷ ಅಭಿವೃದ್ಧಿ ಯೋಜನೆ ಹೀಗೆ ವಿವಿಧ ಯೋಜನೆಗಳಿಗೆ ಶೇಕಡ 25 ಮಾತ್ರ ಹಣ ಬಿಡುಗಡೆಯಾಗಿದೆ ಎಂಬ ವರದಿಯಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹ ಆಮೆಗೆತಿಯಲ್ಲಿ ತನ್ನ ಕೆಲಸ ಮಾಡುತ್ತಿರುವುದಲ್ಲದೇ, ಅಧಿಕಾರಿಗಳ ನಿರ್ಲಕ್ಷತೆ ಸಹ ಎದ್ದು ಕಾಣುತ್ತಿದೆ. ಕಳೆದ ಒಂದು ವರ್ಷದಿಂದ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ, ವಿದೇಶಿ ಶೈಕ್ಷಣಿಕ ಸಾಲ ಯೋಜನೆ, ವ್ಯಾಪಾರ ಅಭಿವೃದ್ಧಿಗಾಗಿ ಸಾಲಾ ಯೋಜನೆ, ಇನ್ನಿತರ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಈವರೆಗೆ ಹಣ ಬಿಡುಗಡೆಯಾಗಿಲ್ಲ, ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಹಣಕಾಸು ಇಲಾಖೆಯಿಂದ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ, ಯೋಜನೆಗಳಿಗಾಗಿ ಪ್ರತಿನಿತ್ಯ ಕಚೇರಿಗಳಿಗೆ ಅಲೆದಾಡುತ್ತಿರುವ ಫಲಾನುಭವಿಗಳ ದುಸ್ಥಿತಿ ಹೇಳತೀರದು. ಈ ದುಸ್ಥಿತಿಗೆ ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖವಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು ಕೊಂಡು ಸೂಕ್ತ ಕ್ರಮ ಜರುಗಿಸಬೇಕು. ಈಗಾಗಲೇ ಘೋಷಿಸಿರುವ ಎಲ್ಲಾ ಆಶ್ವಾಸನೆಗಳನ್ನು ಶೇಕಡ 100 (ನೂರರಷ್ಟು) ಅನುಷ್ಠಾನಕ್ಕೆ ತರಬೇಕು ಹಾಗೂ ಸದರಿ ಯೋಜನೆಗಳಿಗೆ ಬೇಕಾಗಿರುವ ಮೊತ್ತವನ್ನು ಸಹ ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಅಬ್ದುಲ್ ಹನ್ನಾನ್ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
~ಅಬ್ದುಲ್ ಹನ್ನಾನ್,
ರಾಜ್ಯ ಉಪಾಧ್ಯಕ್ಷರು, SDPI ಕರ್ನಾಟಕ
