ಕೊಡ್ಲಿಪೇಟೆ ಹನಫಿ ಜಾಮೀಯಾ ಮಸ್ಜಿದ್ನ ಮಾಜಿ ಅಧ್ಯಕ್ಷರು, ಹಿರಿಯರು, ನಮ್ಮ ಸಂಬಂಧಿ (ನನ್ನ ತಾಯಿಯ ಸೋದರ ಸಂಬಂಧಿ) ಮತ್ತು ಕೊಡ್ಲಿಪೇಟೆಯ ಹೆಮ್ಮೆಯ ವೈದ್ಯರಾಗಿದ್ದ ಡಾ ಇಕ್ಬಾಲ್ ಹುಸೇನ್ (77) ರವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿರುವುದು ದುಃಖದ ಸಂಗತಿ.
ಡಾ. ಇಕ್ಬಾಲ್ ಹುಸೇನ್ ಸರ್ ಅವರು MBBS ಮುಗಿಸಿ, ದೊಡ್ಡ ನಗರಗಳಲ್ಲಿ ಸೇವೆ ಸಲ್ಲಿಸುವ ಮತ್ತು ಹೆಚ್ಚು ಸಂಪಾದಿಸುವ ಅವಕಾಶವಿದ್ದರೂ ತನ್ನ ಊರಾದ ಸಣ್ಣಪಟ್ಟಣ ಕೊಡ್ಲಿಪೇಟೆಯಲ್ಲೆ ಸೇವೆ ಸಲ್ಲಿಸುವ ಆಯ್ಕೆ ಮಾಡಿಕೊಂಡರು. ತಮ್ಮ ಮನೆಯಲ್ಲಿರುವ ಕ್ಲಿನಿಕ್ನಲ್ಲಿ ಹಲವು ದಶಕಗಳ ಕಾಲ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ನಾನು ಚಿಕ್ಕವನಿದ್ದಾಗ ನನ್ನ ಮತ್ತು ನಮ್ಮ ಮನೆಯವರ ಎಲ್ಲಾ ರೋಗಗಳಿಗೆ ನನಗೆ ನೆನಪಿರುವ ಪ್ರಕಾರ ಕೇವಲ 5 ರೂಪಾಯಿಯ ಒಂದು ಚುಚ್ಚುಮದ್ದಿನಲ್ಲಿ ಶಮನವಿತ್ತು.
ವೈದ್ಯಕೀಯ ವೃತ್ತಿ ವ್ಯಾಪಾರವಾಗುತ್ತಿರುವ ಈ ಕಾಲದಲ್ಲಿ, ಬಡಜನರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮನುಷ್ಯತ್ವದ ಪ್ರತೀಕ ಆಗಿದ್ದರು.
ಪ್ರಾಮಾಣಿಕತೆ, ಮೃದು ಸ್ವಭಾವ, ಕರುಣೆ ಇವು ಅವರ ಗುರುತಾಗಿದ್ದು, ಅವರು ಕೊಡ್ಲಿಪೇಟೆ ಸುತ್ತಮುತ್ತಲಿನ ಎಲ್ಲಾ ವರ್ಗದ ಜನರ ಅಚ್ಚುಮೆಚ್ಚಿನ ವೈದ್ಯರಾಗಿದ್ದರು.
ಅವರ ಬದುಕಿನ ಬೃಹತ್ ಸಾಧನೆ ಎಂದರೆ ಮನಸ್ಸಿನಲ್ಲಿ ಸದಾ ಪ್ರೇರಣೆಯಾದ ಮಾನವೀಯತೆ.
ಅವರು ವೈದ್ಯಕೀಯ ಕ್ಷೇತ್ರವನ್ನು ಕೇವಲ ವೃತ್ತಿಯಾಗಿ ಅಲ್ಲ, ಸೇವಾ ಧರ್ಮವಾಗಿ ನಡೆಸಿದದ್ದು ಸ್ಮರಣೀಯ.
ಅವರು ನಡೆದು ಬಂದ ಮನುಷ್ಯತ್ವದ ದಾರಿ, ನಡತೆ, ಸೇವಾಭಾವ ನಮ್ಮಲ್ಲಿಯೇ ಶಾಶ್ವತವಾಗಿ ಉಳಿಯುತ್ತದೆ.
ಸೃಷ್ಟಿಕರ್ತನು ಅವರ ತಪ್ಪುಗಳನ್ನು ಕ್ಷಮಿಸಿ ಜನ್ನತುಲ್ ಫಿರ್ದೌಸ್ನಲ್ಲಿ ಮಹತ್ತರ ಸ್ಥಾನ ನೀಡಲಿ ಆಮೀನ್.
ನಿಮ್ಮ ಸೇವೆ, ನಿಮ್ಮ ನಡತೆ, ನಿಮ್ಮ ಮಾನವೀಯತೆ
ನಿರಂತರವಾಗಿ ನಮ್ಮ ನೆನಪುಗಳಲ್ಲಿ ಪ್ರಕಾಶಿಸುತ್ತಲೇ ಇರುತ್ತದೆ.
