22
Nov

ಪ್ರಸಕ್ತ ವರ್ಷಾಂತ್ಯಕ್ಕೆ ಅವಧಿ ಕೊನೆಗೊಳ್ಳಲಿರುವ ರಾಜ್ಯದ 47 ನಗರಸಭೆ, 91 ಪುರಸಭೆ, 49 ಪಟ್ಟಣ ಪಂಚಾಯತ್ ಸೇರಿ ಒಟ್ಟು 187 ನಗರ ಸ್ಥಳೀಯ ಸಂಸ್ಥೆಗಳ ವಾರ್ಡವಾರು ಮೀಸಲಾತಿ ಜೊತೆಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ (ನವೆಂಬರ್ 17) ನೋಟಿಸ್‌ ಜಾರಿಗೊಳಿಸಿದೆ.

ಕರ್ನಾಟಕ ಪುರಸಭೆ ಕಾಯ್ದೆ, 1964 ರ ಸೆಕ್ಷನ್ 13(1)(ಡಿ) ಅಡಿಯಲ್ಲಿ 187 ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಬೇಕೆಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠವು ನಡೆಸಿದೆ.

ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಿದೆ.

ಪ್ರತಿವಾದಿ (ರೆಸ್ಪಾಂಡೆಂಟ್) ಮುಂದಿನ ವಿಚಾರಣಾ ದಿನಾಂಕಕ್ಕಿಂತ ಮೊದಲೇ ತನ್ನ ಕೌಂಟರ್ ಅಫಿಡವಿಟ್ ಸಲ್ಲಿಸಬೇಕು ಮತ್ತು ಅದರಲ್ಲಿ ಅರ್ಜಿದಾರರ ಅರ್ಜಿಯಲ್ಲಿ ಹೇಳಲಾದ ಎಲ್ಲಾ ಆರೋಪಗಳಿಗೆ/ಹೇಳಿಕೆಗಳಿಗೆ ತನ್ನ ಉತ್ತರವನ್ನು/ಪ್ರತಿವಾದವನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಪೀಠ ಹೇಳಿದೆ.

ಇದಕ್ಕೂ ಮುನ್ನ, ರಾಜ್ಯ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲೆ ವೈಶಾಲಿ ಹೆಗ್ಡೆ, “ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮುಗಿಯಲಿದೆ” ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಟರ್ ಅವರು “ಗ್ರಾಮ ಪಂಚಾಯತ್‌ಗಳ ಚುನಾವಣೆಗೆ ಸಂಬಂಧಿಸಿದ ಅರ್ಜಿಯೊಂದು ಡಿಸೆಂಬರ್ 11ಕ್ಕೆ ನಿಗದಿಯಾಗಿದೆ. ಇದು ನಗರ ಸಭೆ ಮತ್ತು ಪುರಸಭೆಗೆ ಸಂಬಂಧಿಸಿದ್ದಾಗಿದೆ” ಎಂದಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಅವಧಿ ಮುಗಿಯಲಿರುವ ರಾಜ್ಯದ 5,950 ಗ್ರಾಮ ಪಂಚಾಯತ್‌ಗಳಿಗೂ ಸಕಾಲದಲ್ಲಿ ಚುನಾವಣೆ ನಡೆಸಲು ಪೂರಕವಾಗಿ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಚುನಾವಣಾ ಆಯೋಗದ ಪರ ವಕೀಲೆ ಕೋರಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ಜನವರಿ 27 ಮತ್ತು ಜೂನ್ 26ರಂದು ಅಂತಿಮ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಸಕಾಲಕ್ಕೆ ಚುನಾವಣೆ ನಡೆಸದಿರುವುದು ಸಂವಿಧಾನದ 243-ಯು ವಿಧಿ ಉಲ್ಲಂಘನೆಯಾಗಿದ್ದು, ಈಗಾಗಲೇ ಕಲಬುರಗಿ ಜಿಲ್ಲೆ ವಾಡಿ ಪಟ್ಟಣ ಪಂಚಾಯತ್ ಮತ್ತು ಬಾಗಲಕೋಟೆಯ ಮಹಾಲಿಂಗಪುರ ಪುರಸಭೆಯ ಅವಧಿ ಮುಕ್ತಾಯವಾಗಿದೆ ಎಂದು ತಿಳಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993ರ ಸೆಕ್ಷನ್ 5(5) ರ ಅಡಿಯಲ್ಲಿ ಗ್ರಾಮ ಪಂಚಾಯತ್‌ಗಳ ಮೀಸಲಾತಿಯ ಅಂತಿಮ ಅಧಿಸೂಚನೆಗಳನ್ನು ಹೊರಡಿಸಲು ನಿರ್ದೇಶನ ನೀಡುವಂತೆ ಕೋರಿ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರ ವಿಚಾರಣೆ ನಡೆಸಿದ ಹೈಕೋರ್ಟ್, ಇದೇ ರೀತಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಈ ಅರ್ಜಿಯ ಮುಂದಿನ ವಿಚಾರಣೆಯನ್ನೂ ಡಿಸೆಂಬರ್ 11ಕ್ಕೆ ನಿಗದಪಡಿಸಲಾಗಿದೆ. ಹಾಗಾಗಿ, ಎರಡೂ ಅರ್ಜಿಗಳ ಮುಂದಿನ ವಿಚಾರಣೆ ಒಂದೇ ದಿನ ನಡೆಯಲಿದೆ

Leave A Comment