ಬೀದಿ ನಾಯಿ ದಾಳಿಗೆ ಬಾಲಕಿ ಬಲಿ: ಬಾಗಲಕೋಟೆ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ SDPI ತೀವ್ರ ಖಂಡನೆ – ತಕ್ಷಣದ ಪರಿಹಾರಕ್ಕೆ ಆಗ್ರಹ
ಬಾಗಲಕೋಟೆ: ನಗರದ ನವನಗರ ಸೆಕ್ಟರ್ ನಂ. 15ರಲ್ಲಿ ಬೀದಿ ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಾಲಕಿ ಅಲೈನ ಲೋಕಾಪುರ್ ಸಾವಿಗೆ ಜಿಲ್ಲಾಡಳಿತ ಹಾಗೂ ನಗರಸಭೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಾಗಲಕೋಟೆ ವಿಧಾನಸಭಾ ಘಟಕ ಕಿಡಿಕಾರಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪಕ್ಷದ ನಿಯೋಗವು, ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನಗಳ ಅನ್ವಯ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದೆ.
ಮನವಿಯ ಪ್ರಮುಖ ಅಂಶಗಳು ಮತ್ತು ಬೇಡಿಕೆಗಳು:
- ಸರ್ಕಾರದ ನೇರ ಹೊಣೆಗಾರಿಕೆ (Strict Liability): ಸಂವಿಧಾನದ ವಿಧಿ 21ರ ಪ್ರಕಾರ ಪ್ರತಿಯೊಬ್ಬ ನಾಗರಿಕನ ಜೀವ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿ ದಾಳಿಯಿಂದ ಸಂಭವಿಸುವ ಸಾವು-ನೋವುಗಳಿಗೆ ಸ್ಥಳೀಯ ಆಡಳಿತವೇ ನೇರ ಹೊಣೆ ಎಂದು SDPI ಪ್ರತಿಪಾದಿಸಿದೆ.
₹20 ಲಕ್ಷ ಪರಿಹಾರಕ್ಕೆ ಆಗ್ರಹ: ವಿವಿಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಪೀಠಗಳು ನೀಡಿರುವ ನಿರ್ದೇಶನದಂತೆ, ಮೃತ ಬಾಲಕಿಯ ಕುಟುಂಬಕ್ಕೆ ಕನಿಷ್ಠ ₹10 ರಿಂದ ₹20 ಲಕ್ಷ ರೂಪಾಯಿಗಳ ತಕ್ಷಣದ ಪರಿಹಾರ ಧನವನ್ನು ಸರ್ಕಾರ ಬಿಡುಗಡೆ ಮಾಡಬೇಕು.
ಅಧಿಕಾರಿಗಳ ಮೇಲೆ ಕಾನೂನು ಕ್ರಮ: ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ವಿಫಲರಾದ ಮತ್ತು ಸುಪ್ರೀಂ ಕೋರ್ಟ್‌ನ 2026ರ ಮಾರ್ಗಸೂಚಿಗಳನ್ನು ಪಾಲಿಸದ ಸಂಬಂಧಪಟ್ಟ ವಲಯ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯದ ಪ್ರಕರಣ ದಾಖಲಿಸಬೇಕು.
ABC 2 : 4 “Animal Birth Control (ABC) Rules 2023” ಅನ್ನು. ಜಾರಿಗೊಳಿಸಿ, ಜನನಿಬಿಡ ಪ್ರದೇಶಗಳಿಂದ ಅಪಾಯಕಾರಿ ನಾಯಿಗಳನ್ನು ತಕ್ಷಣ ಸ್ಥಳಾಂತರಿಸಬೇಕು.
ರಾಜ್ಯ ಕಾರ್ಯದರ್ಶಿ ರಮಜಾನ್ ಕಡಿವಾಲ ಪ್ರತಿಕ್ರಿಯೆ:
“ಒಂದು ಬಡ ಕುಟುಂಬದ ಮಗು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾಗಿರುವುದು ಇಡೀ ಜಿಲ್ಲೆಗೆ ಅವಮಾನಕರ ಸಂಗತಿ. ಕೇವಲ ಸಾಂತ್ವನ ಹೇಳುವುದರಿಂದ ಕುಟುಂಬದ ನೋವು ನೀಗದು. ಜಿಲ್ಲಾಡಳಿತವು ಲಿಖಿತ ಭರವಸೆ ನೀಡಬೇಕು ಮತ್ತು ನ್ಯಾಯಯುತ ಪರಿಹಾರ ಒದಗಿಸಬೇಕು. ಇಲ್ಲದಿದ್ದಲ್ಲಿ ಸಂತ್ರಸ್ತ ಕುಟುಂಬದ ಪರವಾಗಿ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ SDPI ವಿಧಾನಸಭಾ ಅಧ್ಯಕ್ಷರಾದ ಖಾಸಿಂ ಗೊಳಸಂಗಿ, ಮುಖಂಡರಾದ ಮೆಹಬೂಬ ಹಡಗಲಿ, ಅಲ್ತಾಫ ಮದರಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಾಗಲಕೋಟ ಜಿಲ್ಲೆ
