20
Dec

ಮಾಲೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ದಲಿತ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ, ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ವೀಡಿಯೊ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು:
ಅಬ್ದುಲ್‌ ಮಜೀದ್‌ ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

ಬೆಂಗಳೂರು, 18 ಡಿಸೆಂಬರ್ 2023: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಹಳ್ಳಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ದಲಿತ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ, ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ವೀಡಿಯೊ ಚಿತ್ರೀಕರಿಸಿರುವ ಮತ್ತು ಮಕ್ಕಳನ್ನು ಅಮಾನುಷವಾಗಿ ಹೊಡೆಯುತ್ತಿರುವ ದೃಶ್ಯಗಳನ್ನು ನೋಡಿ ಆಘಾತವಾಯಿತು. ಇದು ನಾಗರಿಕ ಸಮಾಜ ತಲೆ ತಗ್ಗಿಸಿ ನಿಲ್ಲಬೇಕಾದ ಪ್ರಕರಣ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರಿ ವಸತಿ ಶಾಲೆಗಳಿಗೆ ಸೇರುವ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ಶಕ್ತರಲ್ಲದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ವರ್ಗದ ಮಕ್ಕಳೇ ಇರುತ್ತಾರೆ. ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಕನಸಿನೊಂದಿಗೆ ಬರುವ ಈ ಮಕ್ಕಳ ಮೇಲೆ ಇಂತಹ ದೌರ್ಜನ್ಯಗಳನ್ನು ಎಸಗುವ ಶಿಕ್ಷಕರು, ಸಿಬ್ಬಂದಿಯನ್ನು ಮನುಷ್ಯರು ಎಂದು ಕರೆಯಲು ಸಾಧ್ಯವಿಲ್ಲ ಎಂದು ಮಜೀದ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸತಿ ಶಾಲೆಗಳಲ್ಲಿ ಏನು ನಡೆಯುತ್ತಿದೆ ಎಂದು ನಿಯಮಿತವಾಗಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಇಂತಹ ಪ್ರಕರಣಗಳು ಆಗಲೇ ಬೆಳಕಿಗೆ ಬಂದು ಮಕ್ಕಳನ್ನು ಹೆಚ್ಚಿನ ಕ್ರೌರ್ಯ, ಹಿಂಸೆಯಿಂದ ತಪ್ಪಿಸಬಹುದು. ಆದರೆ ಈ ಅಧಿಕಾರಿಗಳು ತಮ್ಮ ಸೋಮಾರಿತನದ ಕಾರಣಕ್ಕೆ ಎ.ಸಿ ಕೊಠಡಿಗಳಿಂದ ಹೊರಗೆ ಬರದೆ ಮಕ್ಕಳ ಜೀವನವನ್ನು ಈ ರೀತಿಯ ಹಿಂಸೆಗೆ ಒಡ್ಡುತ್ತಾರೆ. ಇಲ್ಲಿ ವಸತಿ ಶಾಲೆಯ ಶಿಕ್ಷಕರು, ಸಿಬ್ಬಂದಿಯ ಜೊತೆಗೆ ಈ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Next Post

Leave A Comment