ಒಡಿಶಾದ ಕಟಕ್ನಲ್ಲಿ ದುರ್ಗಾ ಪೂಜೆಯ ವಿಗ್ರಹ ಮೆರವಣಿಗೆ ಸಮಯದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಮಾಡಿದ ಹಿಂಸಾಚಾರ ಅತ್ಯಂತ ಆತಂಕಕಾರಿ ಎಂದು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್ ತುಂಬೆ ತೀವ್ರ ಆಘಾತ ಮತ್ತು ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ಸಾವಿರ ವರ್ಷಗಳ ಧಾರ್ಮಿಕ ಸೌಹಾರ್ದ ಮತ್ತು ಪರಸ್ಪರ ಸಹಕಾರದ ಪರಂಪರೆಯನ್ನು ಹೆಮ್ಮೆಪಡುವ ಕಟಕ್ ನಗರದಲ್ಲಿ ಮುಸ್ಲಿಂ ಶಿಲ್ಪಿಗಳು ಹಿಂದೂ ದೇವತೆಗಳ ಸುಂದರ “ಮೇದಾ” ಅಲಂಕಾರಗಳನ್ನು ನಿರ್ಮಿಸುವುದು ಸಂಪ್ರದಾಯವಾಗಿದ್ದು, ಇದೀಗ ದ್ವೇಷದ ಕಾರಣ ಸೌಹಾರ್ದತೆ ಗಾಯಗೊಂಡಿದೆ. ರಾತ್ರಿ ಸಮಯದ ಮೆರವಣಿಗೆಯ ಶಬ್ದದ ವಿವಾದದಿಂದ ಪ್ರಾರಂಭವಾದ ಈ ಘಟನೆ, ದುರದೃಷ್ಟವಶಾತ್ ವ್ಯಾಪಕವಾಗಿ ಹರಡಿ ಪೊಲೀಸರು ಸೇರಿದಂತೆ 25 ಕ್ಕೂ ಹೆಚ್ಚು ಮಂದಿ ಮತ್ತು ಗಾಯಗೊಂಡಿದ್ದು, ಬೆಂಕಿ ಹಚ್ಚುವಿಕೆಯಿಂದ ಅಪಾರ ಆಸ್ತಿ ನಷ್ಟವಾಗಿದೆ.
ಗಲಭೆಯಲ್ಲಿ ವಿಶ್ವ ಹಿಂದು ಪರಿಷತ್ (VHP) ಸೇರಿದಂತೆ ಬಲಪಂಥೀಯ ಸಂಘಪರಿವಾರ ಸಂಘಟನೆಗಳ ಪಾತ್ರ ಇದೆ ಎಂಬುವುದರ ಕುರಿತು ವಿಶ್ವಾಸಾರ್ಹ ವರದಿಗಳು ಬಂದಿವೆ. ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ವಿಹೆಚ್ಪಿ ಉದ್ದೇಶಪೂರ್ವಕವಾಗಿ ಕಾನೂನು ಬಾಹಿರವಾಗಿ ಬೈಕ್ ರ್ಯಾಲಿ ಆಯೋಜಿಸಿದ್ದು, ಧಾರ್ಮಿಕವಾಗಿ ಸಂವೇದನಾಶೀಲ ಮುಸ್ಲಿಂ ಪ್ರದೇಶಗಳಾದ ದರ್ಗಾ ಬಜಾರ್ ಮುಂತಾದ ಸ್ಥಳಗಳಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಗಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು, ಕಲ್ಲು ತೂರಾಟ, ಅಂಗಡಿಗಳಿಗೆ ಬೆಂಕಿ ಹಚ್ಚುವಿಕೆ, ಮತ್ತು ಅಲ್ಪಸಂಖ್ಯಾತ ಸಮುದಾಯವರ ಮೇಲೆ ಹಲ್ಲೆಗಳು ಮಾಡಿರುವ ಘಟನೆಗಳು ಸಹ ಆಗಿವೆ. ದುರ್ಗಾ ಪೂಜೆಯಂತಹ ಸಾಂಸ್ಕೃತಿಕ ಹಬ್ಬವನ್ನೇ ರಾಜಕೀಯ ಧ್ರುವೀಕರಣದ ಸಾಧನವಾಗಿ ಬಳಸಿ ಕೊಂಡು ಗಲಭೆಗೆ ಕಾರಣಕಾರ್ತರಾದ ಅಧಿಕಾರಿಗಳನ್ನು ವರ್ಗಾಯಿಸಬೇಕು ಮತ್ತು ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಮನೆಗಳನ್ನು ಶೋಧ ನಡೆಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ವಿ.ಹೆಚ್.ಪಿ ಬಂದ್ ಕರೆಗೆ ಆಹ್ವಾನ ನೀಡಿರುವುದು ಅದರ ನೈಜ ರಾಜಕೀಯ ದುರುದ್ದೇಶವನ್ನು ಬಹಿರಂಗಪಡಿಸುತ್ತದೆ.
ಈ ಘಟನೆ ಪ್ರತ್ಯೇಕವಾಗಿಲ್ಲಲ್ಲದೇ, ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಸಂಘಪರಿವಾರ ನಡೆಸುತ್ತಿರುವ ಉದ್ದೇಶಿತವಾದದು. ಧಾರ್ಮಿಕ ಹಬ್ಬಗಳನ್ನು ದುರುಪಯೋಗಪಡಿಸಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಹಿಂಸೆಯನ್ನು ಉಂಟುಮಾಡುವ ಒಂದು ದೊಡ್ಡ ಷಡ್ಯಂತ್ರದ ಭಾಗವಾಗಿವೆ. ಕಟಕ್ ಸರ್ಕಾರ ತಕ್ಷಣದ ಕ್ರಮಗಳಾಗಿ ಕರ್ಫ್ಯೂ ಹೇರುವಿಕೆ, ಇಂಟರ್ನೆಟ್ ನಿರ್ಬಂಧ ಇತ್ಯಾದಿ ತಾತ್ಕಾಲಿಕ ಕ್ರಮಗಳಿಂದ ಶಾಂತಿಯನ್ನು ತರಬಹುದು. ಆದರೆ ನಿಜವಾದ ಪ್ರಚೋದಕರನ್ನು, ಗಲಭೆಕೋರರನ್ನು ಬಿಟ್ಟು ನಿರಪರಾಧಿಗಳ ಬಂಧನ ನಡೆಸಿರುವ ಕ್ರಮ ನಿಷ್ಪಕ್ಷಪಾತ ತನಿಖೆ ಕುರಿತು ಗಂಭೀರ ಪ್ರಶ್ನೆ ಎತ್ತುತ್ತದೆ. ಇಂತಹ ಕ್ರಮಗಳು ಸಂವಿಧಾನದ ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ದುರ್ಬಲಗೊಳಿಸುತ್ತವೆ ಹಾಗೂ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ.
ಕತಕ್ ಹಿಂಸಾಚಾರದ ಕುರಿತು ನ್ಯಾಯಾಂಗದ ನಿಷ್ಪಕ್ಷಪಾತ ತನಿಖೆಯಾಗ ಬೇಕು ಅಲ್ಲದೇ ವಿಹೆಚ್ಪಿ ನಾಯಕರನ್ನು ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಗಾಗಿ ಬಲವಾದ ಮತ್ತು ದೃಢವಾದ ಕ್ರಮ ಕೈಗೊಳ್ಳಬೇಕು. ಒಡಿಶಾ ಸರ್ಕಾರ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ತಾರತಮ್ಯವಿಲ್ಲದೆ ಕಾನೂನುಗಳನ್ನು ಸಮನಾಗಿ ಜಾರಿಗೆ ತಂದು, ಪರಸ್ಪರ ಸಂವಾದದ ಮೂಲಕ ನಂಬಿಕೆ ಮತ್ತು ಶಾಂತಿಯನ್ನು ಪುನಃ ಸ್ಥಾಪಿಸಬೇಕು ಎಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.