18
May

ನವದೆಹಲಿ, ಮೇ 12, 2020: ಆರ್ಥಿಕ ಪುನಶ್ಚೇತನಕ್ಕೆ ಉತ್ತೇಜನ ನೀಡುವ ಹೆಸರಿನಲ್ಲಿ ವಿವಿಧ ರಾಜ್ಯಗಳು ಕಾರ್ಮಿಕ ಕಾನೂನುಗಳ ನಿಯಮಗಳನ್ನು ಸಡಿಲಿಕೆ ಮಾಡಲು ಮುಂದಾಗಿರುವುದು ಅಭಿವೃದ್ಧಿಯ ಬೆನ್ನೆಲುಬಾಗಿರುವ ಕಾರ್ಮಿಕರ ಮೂಲಭೂತ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಟೀಕಿಸಿದ್ದಾರೆ.

ಕೋವಿಡ್- 19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಬೇರೆ ದೇಶಗಳಲ್ಲಿ ಸರ್ಕಾರಗಳು ಉತ್ತೇಜಕ ಪ್ಯಾಕೇಜ್‌ಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದರೆ, ಭಾರತದ ಸರ್ಕಾರ ಮಾತ್ರ, ಸಮಾಜದ ದುರ್ಬಲ ವರ್ಗವಾದ ಕಾರ್ಮಿಕರನ್ನು ಶೋಷಿಸಲು ಮುಂದಾಗಿವೆ ಎಂದು ಅವರು ಆರೋಪಿಸಿದ್ದಾರೆ.

ನಾಲ್ಕು ಕಾರ್ಮಿಕ ಕಾನೂನುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾರ್ಮಿಕ ಕಾನೂನುಗಳನ್ನು 3 ವರ್ಷಗಳ ಅವಧಿಗೆ ಸ್ಥಗಿತಗೊಳಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರ ಮೊದಲು ಕಾರ್ಮಿಕ ವಿರೋಧಿ ನೀತಿ ಪ್ರಕಟಿಸಿತು. ನಂತರ ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ಎಲ್ಲಾ ಬಿಜೆಪಿ ಆಡಳಿತದ ರಾಜ್ಯಗಳು ಇದೇ ನೀತಿಯನ್ನು ಅನುಸರಿಸುತ್ತಿವೆ. ಕಾನೂನುಗಳನ್ನು ಅಮಾನತುಗೊಳಿಸುವುದರಿಂದ ಕಾರ್ಖಾನೆಗಳ ಕಾಯ್ದೆ (ಇದು ಕೆಲಸದ ಸಮಯವನ್ನು ನಿರ್ಣಯಿಸುತ್ತದೆ) ಮತ್ತು ಕೈಗಾರಿಕಾ ವ್ಯಾಜ್ಯ ಕಾಯ್ದೆ (ಕೆಲಸದಿಂದ ತೆಗೆದುಹಾಕುವ ಮೊದಲು ಸೂಚನಾ ಅವಧಿಗಳ ಬಗ್ಗೆ ಹೇಳುತ್ತದೆ) ಮುಂತಾದ ಕಾನೂನುಗಳಿಗೆ ಕಾರ್ಖಾನೆ ಮಾಲೀಕರು ಬದ್ಧರಾಗಬೇಕಾಗುವುದಿಲ್ಲ. ಕೆಲವು ರಾಜ್ಯಗಳು ಕೆಲಸದ ಸಮಯವನ್ನು 8 ರಿಂದ 12 ಗಂಟೆಗಳವರೆಗೆ ಹೆಚ್ಚಿಸಿವೆ.

ಕಾರ್ಮಿಕ ಕಾನೂನುಗಳ ಅಮಾನತಿನಿಂದಾಗಿ, ತಪಾಸಣೆ ನಿಯಮಗಳು ಮತ್ತು ಕಾನೂನು ಉಲ್ಲಂಘನೆಯ ಸಂದರ್ಭಗಳಲ್ಲಿ ಸರ್ಕಾರದ ಹಸ್ತಕ್ಷೇಪ ಮುಂತಾದವುಗಳು ಇರುವುದಿಲ್ಲ. ಉದ್ಯೋಗಿಗಳಿಗೆ ಉದ್ಯೋಗ ಭದ್ರತೆಯ ಹಕ್ಕನ್ನು ನಿರಾಕರಿಸುವ ಮತ್ತು ಬಾಡಿಗೆ ಅಥವಾ ಗುತ್ತಿಗೆ ಆಧಾರದಲ್ಲಿ ಕೆಲಸದವರನ್ನು ನೇಮಕ ಮಾಡಿಕೊಳ್ಳಲು ಮಾಲೀಕರಿಗೆ ಅವಕಾಶ ನೀಡುತ್ತದೆ. ಉದ್ಯೋಗಿಗಳಿಗೆ ಹಾನಿಕಾರಕವಾದ ಅನೇಕ ಲೋಪದೋಷಗಳು ಇರುವ ಹೊರತಾಗಿಯೂ, ಸುರಕ್ಷತಾ ಮಾನದಂಡಗಳಲ್ಲಿ ರಾಜಿ ಮಾಡಿಕೊಂಡು, ಹೊಸ ಕಾರ್ಖಾನೆಗಳನ್ನು ಪ್ರಾರಂಭಿಸಲು ಸರ್ಕಾರಗಳು ಪರವಾನಗಿ ಮತ್ತು ಕಾನೂನು ನಿಬಂಧನೆಗಳನ್ನು ಸಡಿಲಗೊಳಿಸಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ವಿಶಾಖಪಟ್ಟಣಂ ಮತ್ತು ರಾಯ್‌ಗಡದಲ್ಲಿ ಇತ್ತೀಚೆಗೆ ಸರಿಯಾದ ಸುರಕ್ಷತಾ
ಮುನ್ನೆಚ್ಚರಿಕೆಗಳ ಕೊರತೆಯಿಂದಾಗಿ ಉಂಟಾದ ಅನಿಲ ಸೋರಿಕೆಯಂತಹ ದುರಂತ ಸಂಭವಿಸಿದ ಸಂದರ್ಭದಲ್ಲೇ ಸರ್ಕಾರ ಇಂತಹ ನಿಯಮ ಸಡಿಲಿಕೆಗಳಿಗೆ ಅವಕಾಶ ಮಾಡಿಕೊಡುತ್ತಿದೆ.

ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸುವ ನಿರ್ಧಾರವನ್ನು ಸರ್ಕಾರಗಳು ಪುನರ್ ಪರಿಶೀಲಿಸಬೇಕು. ಕಾರ್ಮಿಕರನ್ನು ಬಲಿಪಶುಗಳನ್ನಾಗಿ ಮಾಡದೆ ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಪರ್ಯಾಯ ಉತ್ತೇಜಕ ಮಾರ್ಗಗಳನ್ನು ಅನುಸರಿಸಬೇಕು. ಕಾರ್ಮಿಕರು ಈಗಾಗಲೇ ಕಳೆದ ಎರಡು ತಿಂಗಳುಗಳಿಂದ ಉದ್ಯೋಗವಿಲ್ಲದೆ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ, ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಬಾರದು ಎಎಂದು ಫೈಝಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Leave A Comment