ಬೆಂಗಳೂರು ಶಾಲೆಗಳಿಗೆ ಹುಸಿ ಬಾಂಬ್ ಕರೆಗಳ ಮೂಲ ಮತ್ತು ಉದ್ದೇಶದ ಸಮಗ್ರ ತನಿಖೆಯಾಗಲಿ. ಇಂತಹ ಕರೆಗಳ ಹಿಂದೆ ಯೋಜಿತ ಷಡ್ಯಂತ್ರವಿರುವಂತಿದೆ: ದೇವನೂರು ಪುಟ್ಟನಂಜಯ್ಯ, ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 02 ಡಿಸೆಂಬರ್ 2023: ಇಂದು ಬೆಂಗಳೂರಿನ ಸುಮಾರು 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಗಳು ಬಂದಿವೆ. ಇಂತಹ ಹುಸಿ ಬಾಂಬ್ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಚುನಾವಣೆ ಹತ್ತಿರವಾಗುವ ದಿನಗಳಲ್ಲೇ ಹೆಚ್ಚಾಗುವುದನ್ನು ನಾವು ಗಮನಿಸಿದ್ದೇವೆ. ಇಂತಹ ಕರೆಗಳ ಮೂಲ ಮತ್ತು ಅವುಗಳ ಉದ್ದೇಶದ ಸಮಗ್ರ ತನಿಖೆಯಾಗಲಿ. ಇಂತಹ ಕರೆಗಳ ಹಿಂದೆ ಯೋಜಿತ ಷಡ್ಯಂತ್ರವಿರುವ ಸಾಧ್ಯತೆ ಇದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯನವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಅಭಿಪ್ರಾಯಪಟ್ಟಿದ್ದಾರೆ.

ಇನ್ನೇನು ಲೋಕಸಭೆ ಚುನಾವಣೆಗಳು ಹತ್ತಿರವಿರುವ ಸಂದರ್ಭದಲ್ಲಿ ಇಂತಹ ಹುಸಿ ಬಾಂಬ್ ಬೆದರಿಕೆಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿವೆ. ನವೆಂಬರ್ ತಿಂಗಳಿನಲ್ಲಿ ಪ್ರತಿಷ್ಠಿತ TCS, BDO-Rise ನಂತಹ ಕಂಪನಿಗಳಿಗೆ ಬಾಂಬ್ ಸಂದೇಶಗಳು, ಕರೆಗಳು ಬಂದಿದ್ದವು. ಬಾಂಬ್ ನಿಷ್ಕ್ರಿಯ ದಳದವರು ಶೋಧ ನಡೆಸಿದ ನಂತರ ಅವು ಹುಸಿ ಎಂದು ತಿಳಿದುಬಂದಿದೆ. TCS ಪ್ರಕರಣದಲ್ಲಿ ಮಾಜಿ ಮಹಿಳಾ ಉದ್ಯೋಗಿ, BDO-Rise ಪ್ರಕರಣದಲ್ಲಿ ನವನೀತ್ ಎಂಬುವವನನ್ನು ಬಂಧಿಸಲಾಯಿತು. ಅದೇ ರೀತಿ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬೈ ಕಂಪೆನಿಯೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಜುಲೈ ತಿಂಗಳಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿತ್ತು. ಇವೆಲ್ಲ ಹುಸಿ ಬೆದರಿಕೆಗಳು ಎಂದು ಶೋಧ ನಡೆದ ನಂತರ ಸಾಬೀತಾಗಿವೆ. ಇಂತ ಹುಸಿ ಕರೆಗಳ ಹಿಂದೆ ಚುನಾವಣೆ ಸನ್ನಿಹಿತ ಸಂದರ್ಭದಲ್ಲಿ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ದುರುದ್ದೇಶವಿದೆ ಎಂದು ಪುಟ್ಟನಂಜಯ್ಯ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಇಂತಹ ಪ್ರಕರಣಗಳು ನಡೆದಾಗ ಯಾವುದೇ ಸಮುದಾಯವನ್ನು ಗುರಿ ಪಡಿಸದೆ, ನೈಜ ಆರೋಪಿಗಳ ಪತ್ತೆಯಾಗಬೇಕು. ಬಿಜೆಪಿ ಮತ್ತು ಸಂಘಪರಿವಾರ ಈ ಸಂದರ್ಭವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಧಾವಂತದಲ್ಲಿವೆ ಎಂದು ಪುಟ್ಟನಂಜಯ್ಯ ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪೊಲೀಸರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅದರ ಮೂಲಕ್ಕೆ ಹೋಗಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಇದು ಬಹುದೊಡ್ಡ ಹಾವಳಿಯಾಗಿ ಪರಿಣಮಿಸುವ ಅಪಾಯವಿದೆ ಎಂದು ಪುಟ್ಟನಂಜಯ್ಯ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Leave A Comment