ಬೆಳಗಾವಿ. ನ – 4 : ಜಿಲ್ಲೆಯ ರೈತರು ಕಳೆದ ಹಲವು ದಿನಗಳಿಂದ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೀದಿಗೆ ಬಂದು ಹೋರಾಟ ನಡೆಸುತ್ತಿದ್ದರು ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಸರ್ಕಾರದ ಈ ನಡೆ ಅತ್ಯಂತ ಖಂಡನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಜಿಲ್ಲಾಧ್ಯಕ್ಷ, ಮೌಜಮ್ಮಾ ಮುಲ್ಲಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬು ದರವನ್ನು ರೂ. 3,500 ಮುಂದುವರಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಸರ್ಕಾರ ಮಾನ್ಯತೆ ನೀಡಿದೆ ನಿರ್ಲಕ್ಷ್ಯತೆ ತೋರಿಸುವುದನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಗೊತ್ತಾಗುತ್ತಿದೆ. ರೈತರ ದುಡಿಮೆ ಮತ್ತು ಅವರ ಶ್ರಮವೇ ನಮ್ಮ ರಾಜ್ಯದ ಆರ್ಥಿಕತೆಗೆ ಬೆನ್ನೆಲುಬು. ಆದರೆ ಸರ್ಕಾರ ಈ ಹೋರಾಟದ ಧ್ವನಿಗೆ ಕಿವಿಗೊಡದೆ, ರೈತರನ್ನೇ ಸಂಕಷ್ಟಕ್ಕೆ ತಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಬೆಳೆ ಖರ್ಚು ಹೆಚ್ಚಾಗುತ್ತಾ ಬಂದರೂ ಬೆಂಬಲ ಬೆಲೆ ಯಥಾಸ್ಥಿತಿಯಲ್ಲಿಯೇ ಉಳಿದಿದೆ. ರೈತರಿಗೆ ಸಾಲದ ಹೊರೆ, ಹೆಚ್ಚು ಖರ್ಚಿನ ಒತ್ತಡ ಮತ್ತು ಪ್ರಕೃತಿ ವಿಕೋಪಗಳ ಮಧ್ಯೆ ಬದುಕು ನಡೆಸುವುದು ಅಸಾಧ್ಯವಾಗುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ತಾನು ರೈತಪರ, ತಾನು ರೈತ ಹೋರಾಟಗಾರ ನಂಜುಂಡಸ್ವಾಮಿ ರವರ ಶಿಷ್ಯ ಎಂದು ಹೇಳಿ ಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಸ್ತುತ ರೈತರ ಕಷ್ಟಕ್ಕೆ ಸ್ಪಂದಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯ ಮಂತ್ರಿಗಳ ಈ ನಡೆ ಅತ್ಯಂತ ಅಘಾತಕಾರಿ ಬೆಳವಣಿಗೆ ಅಲ್ಲದೇ ರೈತರ ಕುರಿತು ನಿರ್ಲಕ್ಷ್ಯತನವನ್ನು ತೋರಿರುವುದು ಇಡೀ ರಾಜ್ಯಕ್ಕೆ ಮಾಡಿರುವ ಅವಮಾನವಾಗಿದೆ ಎಂದು SDPI ಜಿಲ್ಲಾಧ್ಯಕ್ಷ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸ ಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
