ಸಿದ್ದರಾಮಯ್ಯ ಸರ್ಕಾರದ ಬಜೆಟ್ – ಅಲ್ಪಸಂಖ್ಯಾತರು, ದಲಿತರು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಅನ್ಯಾಯ: SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026–27ನೇ ಸಾಲಿನ ರಾಜ್ಯ ಬಜೆಟ್ ಮೇಲ್ನೋಟಕ್ಕೆ ಕೆಲವು ಘೋಷಣೆಗಳನ್ನು ಮಾಡಿದ್ದರೂ, ವಾಸ್ತವದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮಹಾದ್ರೋಹ ಎಸಗಿರುವ ಬಜೆಟ್ ಎಂದು SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.
ಸರ್ಕಾರ ಶಿಶುನಾಳ ಶರೀಫರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳ ಸ್ಥಾಪನೆಗೆ ₹10 ಕೋಟಿ, 117 ಮೌಲಾನಾ ಆಜಾದ್ ಮಾದರಿ ಶಾಲೆಗಳು ಹಾಗೂ ಉರ್ದು ಶಾಲೆಗಳ ಉನ್ನತೀಕರಣಕ್ಕೆ ₹400 ಕೋಟಿ, ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಅಭಿವೃದ್ಧಿಗೆ ₹100 ಕೋಟಿ, ಹಾಗೂ ಅಲ್ಪಸಂಖ್ಯಾತರ ಪ್ರತಿಭಾವಂತ ಬಡ 5,000 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಗಾಗಿ ತಲಾ ₹50,000 ನೀಡುವಂತಹ ಘೋಷಣೆಗಳನ್ನು ಮಾಡಿದೆ. ಈ ಘೋಷಣೆಗಳನ್ನು ಮುಂದಿಟ್ಟುಕೊಂಡು ಮನುವಾದಿ ಬಿಜೆಪಿ ಇದನ್ನು “ಮುಸ್ಲಿಮರ ಬಜೆಟ್” ಎಂದು ಪ್ರಚಾರ ಮಾಡಲು ಅವಕಾಶ ಸಿಕ್ಕಿದೆ.
ಆದರೆ ವಾಸ್ತವವಾಗಿ ಈ ಬಜೆಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಮುಸ್ಲಿಮರು ಸೇರಿ ಕ್ರೈಸ್ತರು, ಬೌದ್ಧರು, ಜೈನರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಒಟ್ಟು ದೊರಕುತ್ತಿರುವುದು ಕೇವಲ ಸುಮಾರು ₹3400 ಕೋಟಿ ಮಾತ್ರ. ಕಳೆದ ವರ್ಷ ಅಲ್ಪಸಂಖ್ಯಾತರಿಗೆ ₹4700 ಕೋಟಿ (ಬಜೆಟ್ನ 1.18%) ಮೀಸಲಾಗಿದ್ದರೆ, ಈ ಬಾರಿ ಅದು ಕೇವಲ ₹3400 ಕೋಟಿ (0.76%)ಕ್ಕೆ ಇಳಿದಿರುವುದು ಸರ್ಕಾರದ ನಿಜ ಮುಖವನ್ನು ಬಯಲಿಗೆಳೆಯುತ್ತದೆ.
ಇದೇ ರೀತಿಯಲ್ಲಿ ಈ ಬಾರಿಯ ಬಜೆಟ್ನಲ್ಲಿ ದಲಿತ ಸಮುದಾಯಕ್ಕೂ ನ್ಯಾಯ ದೊರಕಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ನೀಡುವ ಅನುದಾನವನ್ನು ಶೇಕಡಾವಾರು ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಕಳೆದ 2025–26ರ ಬಜೆಟ್ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್ನ 4.39% (₹17,473 ಕೋಟಿ) ನೀಡಲಾಗಿತ್ತು. ಆದರೆ ಈ ಬಾರಿ ಅದನ್ನು ಕಡಿತಗೊಳಿಸಿ ಬಜೆಟ್ನ ಕೇವಲ 4.14% (₹18,612 ಕೋಟಿ) ಮಾತ್ರ ಮೀಸಲಿಡಲಾಗಿದೆ. ಒಟ್ಟು ಮೊತ್ತ ಹೆಚ್ಚಾದಂತೆ ಕಂಡರೂ, ಬಜೆಟ್ನ ಶೇಕಡಾವಾರು ಪ್ರಮಾಣವನ್ನು ನೋಡಿದಾಗ ಸರ್ಕಾರದ ಅನ್ಯಾಯ ಸ್ಪಷ್ಟವಾಗುತ್ತದೆ.
ಶಿಕ್ಷಣ ಕ್ಷೇತ್ರವನ್ನೂ ಈ ಬಜೆಟ್ನಲ್ಲಿ ಸರ್ಕಾರ ಕಡೆಗಣಿಸಿದೆ. ಶಿಕ್ಷಣಕ್ಕೆ ಕೇವಲ ಬಜೆಟ್ನ 10.54% ಮಾತ್ರ ಮೀಸಲಾಗಿದ್ದು, ಇದು ರಾಷ್ಟ್ರೀಯ ಸರಾಸರಿ 15% ಕ್ಕಿಂತ ಬಹಳ ಕಡಿಮೆ. ಕಳೆದ 2025–26ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ನ 11.38% (₹45,286 ಕೋಟಿ) ನೀಡಲಾಗಿದ್ದರೆ, ಈ ಬಾರಿ ಅದನ್ನು 10.54% (₹47,224 ಕೋಟಿ) ಗೆ ಇಳಿಸಲಾಗಿದೆ. ಇದರಿಂದ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಗಂಭೀರತೆಯಿಂದ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಆರೋಗ್ಯ ಕ್ಷೇತ್ರದಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದಿದೆ. ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಹಲವು ಕೊರತೆಗಳಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ 2025–26ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ಬಜೆಟ್ನ 4.39% (₹17,473 ಕೋಟಿ) ನೀಡಲಾಗಿದ್ದರೆ, ಈ ಬಾರಿ ಅದನ್ನು 3.98%ಕ್ಕೆ ಇಳಿಸಿ ₹17,817 ಕೋಟಿ ಮಾತ್ರ ಮೀಸಲಿಸಲಾಗಿದೆ. ಇದು ಜನರ ನಿರೀಕ್ಷೆಗಳಿಗೆ ಧಕ್ಕೆ ತರುವಂತಾಗಿದೆ.
ಒಟ್ಟಾರೆ ಈ ಬಜೆಟ್ ಅಲ್ಪಸಂಖ್ಯಾತರು, ದಲಿತರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಕಡೆಗಣಿಸಿರುವ ಬಜೆಟ್ ಆಗಿದ್ದು, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿಜ ಮುಖವನ್ನು ಬಯಲಿಗೆಳೆಯುತ್ತದೆ ಎಂದು SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ತಿಳಿಸಿದ್ದಾರೆ.
