ಧಾರವಾಡ, ಜೂನ್ 9: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸಂಭವನೀಯ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಎಸ್‌ಡಿಪಿಐ ಧಾರವಾಡ ನಗರ ಸಮಿತಿ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಸಮಿತಿಯ ಜಂಟಿ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಹಲ್ಯಾಳ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಜದ್ ಖಾನ್ ರವರ ಉಪಸ್ಥಿತಿಯಲ್ಲಿ ಜರುಗಿತು.
ಸಭೆಯಲ್ಲಿ ಕ್ಷೇತ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಪಕ್ಷದ ಸಂಘಟನೆ ಬಲ ಹಾಗೂ ಜನಾಭಿಪ್ರಾಯಗಳ ಕುರಿತು ಸವಿಸ್ತಾರ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ, ಮುಂಬರುವ ಉಪಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧಿಸಬೇಕೆಂಬ ಅಭಿಪ್ರಾಯವನ್ನು ಒಮ್ಮತದಿಂದ ವ್ಯಕ್ತಪಡಿಸಲಾಯಿತು.
ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ನಾಯಕತ್ವಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ಸಭೆಯ ನಿರ್ಣಯವನ್ನು ರಾಜ್ಯ ನಾಯಕತ್ವಕ್ಕೆ ಕಳುಹಿಸಲಾಗಿದೆ.
ಇದರೊಂದಿಗೆ ಸಂಘಟನೆ ಬಲವರ್ಧನೆ, ಜನಸಂಪರ್ಕ ಕಾರ್ಯಕ್ರಮಗಳನ್ನು ವಿಸ್ತರಿಸುವುದು ಹಾಗೂ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕುರಿತು ಮಹತ್ವದ ಚರ್ಚೆಗಳು ನಡೆಯಿತು.
ಪಕ್ಷ ಸಂಘಟನೆ, ಜನರೊಂದಿಗೆ ನಂಟು, ನ್ಯಾಯ, ಸಮಾನತೆ ಮತ್ತು ಹಕ್ಕುಗಳಿಗಾಗಿ ಹೋರಾಟ ಮುಂದುವರೆಸಲು ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸಮಿತಿ ಮತ್ತು ಧಾರವಾಡ ನಗರ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
