ಪೆರಿಯಾರ್ ಅವರ ಹೋರಾಟ ಮಾನವ ಘನತೆ, ಸಮಾನತೆ ಮತ್ತು ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ
ಆನೇಕಲ್:ಸೆ. 17:
ಸಾಮಾಜಿಕ ನ್ಯಾಯ, ಸಮಾನತೆ, ಸ್ವಾಭಿಮಾನ ಹಾಗೂ ವೈಚಾರಿಕ ಚಿಂತನೆಯ ಮೂಲಕ ಸಮಾಜದಲ್ಲಿ ಮಹತ್ವದ ಪರಿವರ್ತನೆಗೆ ಕಾರಣರಾದ ತಂದೆ ಪೆರಿಯಾರ್ ಈ.ವಿ. ರಾಮಸ್ವಾಮಿ ನಾಯಕ್ಕರ್ ಅವರ 147ನೇ ಜನ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ (ರಿ) ವತಿಯಿಂದ ಆನೇಕಲ್ನ ಕಾವಲ್ ಹೊಸಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೆರಿಯಾರ್ ಅವರ ಹೋರಾಟವು ಯಾವುದೇ ಒಂದು ಸಮುದಾಯ ಅಥವಾ ವರ್ಗಕ್ಕೆ ಸೀಮಿತವಾಗಿರಲಿಲ್ಲ. ಜಾತಿ ತಾರತಮ್ಯ, ಅಸಮಾನತೆ, ಮೂಢನಂಬಿಕೆ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ ಅವರು ನಡೆಸಿದ ಹೋರಾಟವು ಮಾನವ ಘನತೆ ಮತ್ತು ಸಮಾನತೆಯ ಪರವಾಗಿತ್ತು ಎಂದು ಹೇಳಿದರು.
ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾಗಿ ಬದುಕುವ ಹಕ್ಕು, ಶಿಕ್ಷಣದ ಹಕ್ಕು, ಸಮಾನ ಅವಕಾಶ ಹಾಗೂ ಸ್ವಾಭಿಮಾನದ ಬದುಕು ದೊರೆಯಬೇಕು ಎಂಬುದು ಪೆರಿಯಾರ್ ಅವರ ಚಿಂತನೆಯ ಪ್ರಮುಖ ಆಶಯವಾಗಿತ್ತು. ಇಂದಿಗೂ ಸಮಾಜದಲ್ಲಿರುವ ಜಾತಿ ಆಧಾರಿತ ತಾರತಮ್ಯ, ಸಾಮಾಜಿಕ ಅಸಮಾನತೆ ಮತ್ತು ಅವಕಾಶಗಳಲ್ಲಿನ ಅಂತರಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಸ್ವಾಭಿಮಾನದಿಂದ ಬದುಕುವುದು ಪ್ರತಿಯೊಬ್ಬ ಮನುಷ್ಯನ ಹಕ್ಕು. ಈ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಅಪ್ಸರ್ ಕೊಡ್ಲಿಪೇಟೆ ಹೇಳಿದರು.
ಪೆರಿಯಾರ್ ಅವರ ಜನ್ಮ ದಿನಾಚರಣೆ ಕೇವಲ ಸ್ಮರಣೆಯ ಕಾರ್ಯಕ್ರಮವಾಗದೆ, ಸಮಾನತೆ, ಸಾಮಾಜಿಕ ನ್ಯಾಯ, ವೈಚಾರಿಕತೆ ಮತ್ತು ಮಾನವ ಘನತೆಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದರ್ಭವಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಯುಶ್ಮಾನ್ ಜ್ಞಾನಲೋಕ ಬಂತೇಜಿ, ಆನಂದ ಬುದ್ಧವಿಹಾರ, ಕುಂದಾಣ, ದೇವನಹಳ್ಳಿ; ಆಯುಶ್ಮಾನ್ ಗೌತಮ್ ಸುರೇಶ್, ಬಿಎಸ್ಪಿ ಮುಖಂಡರು, ರಾಮನಗರ; ಆಯುಶ್ಮಾನ್ ಪಿಟಿಸಿಎಲ್ ಮಂಜು, ರಾಜ್ಯಾಧ್ಯಕ್ಷರು, ಪಿಟಿಸಿಎಲ್ ಹೋರಾಟ ಸಮಿತಿ; ಕೆ. ಮುನಿರಾಜು, ರಾಜ್ಯಾಧ್ಯಕ್ಷರು, ಕರ್ನಾಟಕ ದಲಿತ, ಹಿಂದುಳಿದ, ಕ್ರೈಸ್ತ ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ (ರಿ); ಬಿ.ಎಂ. ವೆಂಕಟೇಶ್, ರಾಜ್ಯ ಉಪಾಧ್ಯಕ್ಷರು; ಅಡ್ವೊಕೇಟ್ ವಿಜಯನ್, ಹೈಕೋರ್ಟ್ ವಕೀಲರು; ಹುಳಿಮಾವು ಆನಂದ್, ನಾಗರತ್ನಮ್ಮ, ತಿರುಪಾಳ್ಯ; ಪಿ.ಜಿ. ಥಾಮಸ್, ಸೈಯದ್ ಅನ್ಸರ್ ಪಾಷ, ಶಿವರಾಮು ರಾಮಸಾಗರ, ಅನಿತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಯೋಜಿಸಿದ ಕರ್ನಾಟಕ ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಭಾಗವಹಿಸಿದ ಎಲ್ಲಾ ಗಣ್ಯರಿಗೆ ಅಪ್ಸರ್ ಕೊಡ್ಲಿಪೇಟೆ ಅವರು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.
