ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ದೇಶದ ಎಲ್ಲ ಜನತೆಗೆ ಹೃತ್ಪೂರ್ವಕ ಶುಭಾಶಯಗಳು.
ಗಾಂಧೀಜಿ ಕಂಡ ಭಾರತ ಸರ್ವಾಧಿಕಾರದ ಭಾರತವಾಗಿರಲಿಲ್ಲ. ಅದು ಕೊನೆಯ ವ್ಯಕ್ತಿಯ ಕಣ್ಣೀರು ಒರೆಸುವ ಭಾರತ. ಹಿಂದೂ-ಮುಸ್ಲಿಂ ಒಗ್ಗಟ್ಟಿನ ಭಾರತ. ಅಸ್ಪೃಶ್ಯತೆ, ಜಾತಿ, ಧಾರ್ಮಿಕ ದ್ವೇಷ ಇಲ್ಲದ ಭಾರತ, ಸತ್ಯ ಮತ್ತು ನ್ಯಾಯವೇ ರಾಜಕೀಯದ ನೈತಿಕತೆಯಾಗಿರುವ ಭಾರತ, ‘ರಾಮರಾಜ್ಯ’ ಎಂದು ಅವರು ಕರೆದದ್ದು ಯಾವುದೇ ಒಂದು ಧರ್ಮದ ಆಳ್ವಿಕೆಯಲ್ಲ. ಅನ್ನ, ವಸ್ತ್ರ, ವಸತಿ, ಘನತೆ ಮತ್ತು ನ್ಯಾಯ ಪ್ರತಿಯೊಬ್ಬರಿಗೂ ತಲುಪುವ ಸ್ವರಾಜ್ಯ.
ಇಂದು ಆ ದೃಷ್ಟಿಯನ್ನು ನೆನಪಿಸಿಕೊಳ್ಳುವುದು ಕೇವಲ ಗೌರವಾರ್ಪಣೆಯಲ್ಲ. ಅದು ಆವಶ್ಯಕತೆ.
ದೇಶದಲ್ಲಿ ದ್ವೇಷದ ರಾಜಕಾರಣ ಬೆಳೆಯುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಮತ್ತು ಬಡವರ ಸುರಕ್ಷತೆ ಪ್ರಶ್ನೆಯಾಗಿದೆ. ಸಂವಿಧಾನದ ಭರವಸೆಗಳು ಕಾಗದದ ಮೇಲೆ ಉಳಿದು, ಬೀದಿಯಲ್ಲಿ ಭಯ ಮತ್ತು ಅಸಮಾನತೆ ಬೆಳೆಯುತ್ತಿದೆ. ಗಾಂಧೀಜಿ ‘ಹಿಂಸೆಯಿಂದ ಸ್ವಾತಂತ್ರ್ಯ ಬರುವುದಿಲ್ಲ’ ಎಂದು ಹೇಳಿದರು. ಇಂದು ಹಿಂಸೆ, ದ್ವೇಷಭಾಷಣ ಮತ್ತು ಸಾಮುದಾಯಿಕ ಧ್ರುವೀಕರಣವನ್ನು ರಾಜಕೀಯ ಶಕ್ತಿಯನ್ನಾಗಿ ಮಾಡಲಾಗುತ್ತಿದೆ. ಇದು ಗಾಂಧಿ ಕಂಡ ಭಾರತಕ್ಕೆ ನೇರ ವಿರುದ್ಧ.
ಗಾಂಧೀಜಿ ನಮಗೆ ಬಿಟ್ಟು ಹೋದದ್ದು ವ್ಯಕ್ತಿಪೂಜೆಯಲ್ಲ. ಸತ್ಯಾಗ್ರಹದ ಧೈರ್ಯ. ಅನ್ಯಾಯದ ಮುಂದೆ ಮೌನವಾಗದ ನೈತಿಕ ಹೊಣೆ. ಧರ್ಮಗಳ ನಡುವೆ ಸೇತುವೆಯಾಗುವ ಕರ್ತವ್ಯ. ಸಂವಿಧಾನ ಆ ದಾರಿಯನ್ನೇ ಕಾನೂನಿನ ರೂಪದಲ್ಲಿ ಉಳಿಸಿದೆ. ಆದ್ದರಿಂದ ಗಾಂಧಿ ಜಯಂತಿ ಸಂವಿಧಾನ ರಕ್ಷಣೆಯ ದಿನವೂ ಆಗಬೇಕು.
ಹಾಗಾಗಿ ಹಸಿವು ಮುಕ್ತ, ಭಯ ಮುಕ್ತ ಭಾರತವನ್ನು ಕಟ್ಟ ಹೊರಟ ಎಸ್‌ಡಿಪಿಐ ಈ ದಿನದಂದು ಪುನರುಚ್ಚರಿಸುತ್ತದೆ: ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವಿಲ್ಲದೆ ಗಾಂಧಿ ಕಂಡ ಭಾರತ ಸಾಧ್ಯವಿಲ್ಲ. ಬಾಪು ಕಂಡ ಭಾರತವನ್ನು ನಾವು ಮತ್ತೆ ಕಟ್ಟೋಣ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
