ಬೆಂಗಳೂರು, 7 ನವೆಂಬರ್ 2021: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯದ 2 ದಿನಗಳ ಪ್ರತಿನಿಧಿಗಳ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಎಮ್. ಕೆ. ಫೈಝಿ, ರಾಷ್ಟ್ರೀಯ ಉಪಾಧ್ಯಕ್ಷರು ದೆಹಲಾನ್ ಬಾಘವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ಮಹಮ್ಮದ್ ತುಂಬೆ ಹಾಗೂ ಮಹಮ್ಮದ್ ಶಫಿರವರ ನೇತೃತ್ವದಲ್ಲಿ 2021-24ರ ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ನೂತನ 27 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು, ಉಪಾಧ್ಯಕ್ಷರುಗಳಾಗಿ ದೇವನೂರು ಪುಟ್ನಂಜಯ್ಯ ಹಾಗೂ ಪ್ರೊಫೆಸರ್ ಸಯಿದಾ ಸಾದಿಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಪುತ್ತೂರು, ಭಾಸ್ಕರ್ ಪ್ರಸಾದ್ ಹಾಗೂ ಆಫ್ಸರ್ ಕೊಡ್ಲಿಪೇಟೆ, ಕಾರ್ಯದರ್ಶಿಗಳಾಗಿ ಅಶ್ರಫ್ ಮಾಚಾರ್, ಅನಂದ್ ಮಿತ್ತಬೈಲ್, ಶಾಫಿ ಬೆಳ್ಳಾರೆ, ಕೋಶಾಧಿಕಾರಿಯಾಗಿ ಖಾಲಿದ್ ಯಾದ್ಗೀರ್, ರಾಜ್ಯ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಹನ್ನಾನ್, ಪ್ರೋಫೆಸರ್ ನಾಝ್ನಿನ್ ಬೇಗಂ, ಅಲ್ಫಾನ್ಸೋ ಫ್ರಾಂಕೋ, ಅಡ್ವೋಕೆಟ್ ಮಜೀದ್ ಖಾನ್, ಮುಜಾಹಿದ್ ಪಾಷ, ಅಮ್ಜದ್ ಖಾನ್, ಅಬ್ದುಲ್ ರಹೀಂ ಪಟೇಲ್, ಅತಾವುಲ್ಲಾ ಜೋಕಟ್ಟೆ, ಇಬ್ರಾಹಿಂ ಮಜೀದ್ ತುಂಬೆ, ಝೀನತ್ ಬಂಟ್ವಾಳ, ಪ್ರೋಫೆಸರ್ ಘಯಾಸುದ್ದೀನ್, ಮೆಹಬೂಬ್ ಮುಲ್ಲಾ, ಮೌಲಾನ ನೂರುದ್ದಿನ್, ರಿಯಾಜ್ ಕಡಂಬು, ಸಲೀಂ ಖಾನ್ ಶಿವಮೊಗ್ಗ ಹಾಗೂ ರಫೀ ಪಾಷರವರು ಆಯ್ಕೆಯಾದರು.

ರಾಜ್ಯ ಪ್ರತಿನಿಧಿ ಸಭೆಯಲ್ಲಿ ತೆಗೆದು ಕೊಂಡು ನಿರ್ಧಾರಗಳು ಈ ಕೆಳಕಂಡಂತೆ ಇವೆ.

  1. ಚರ್ಚ್ ಗಳು ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಅಸಾಂವಿಧಾನಿಕ. ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ‍್ಯ ಹರಣವಾಗಿದೆ. ಸಂವಿಧಾನದ 14 ಮತ್ತು 21 ನೇ ವಿಧಿಯಡಿಯಲ್ಲಿ ದೊರೆತಿರುವ ಸಮಾನತೆ ಮತ್ತು ಖಾಸಗಿ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿ ಕೊಂಡು ಈ ರೀತಿಯಾಗಿ ಅಸಾಂವಿಧಾನಿಕ ಆದೇಶ ಹೊರಡಿಸಿರುವುದು ಖಂಡನೀಯ. ಆದುದರಿಂದ ಈ ಆದೇಶವನ್ನು ಸರ್ಕಾರ ವಾಪಸ್ಸುಪಡೆಯಬೇಕು.
  2. ಕರ್ನಾಟಕ ರಾಜ್ಯ ಅಭಿವೃದ್ಧಿ ವಿಷಯದಲ್ಲಿ ಬಹಳ ಹಿಂದುಳಿದಿದೆ ಎನ್ನುವುದಕ್ಕೆ ಅನೇಕ ವರದಿಗಳು ಸಹಮತ ನೀಡಿವೆ. ಅದರಲ್ಲೂ ವಿದ್ಯಾವಂತ ಸ್ಥಳೀಯಯರು ಉದ್ಯೋಗ ಇಲ್ಲದೆ ಬಡತನದ ವಾತಾವರಣದಲ್ಲಿ ಉಸಿರುಗಟ್ಟಿಸುವ ಜೀವನ ಸಾಗಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಯ ಕುರಿತು ಸರೋಜಿನಿ ಮಹಿಷಿ ವರದಿ ಸಹ ತನ್ನ ವರದಿಯಲ್ಲಿ ಕನ್ನಡಿಗರಿಗೆ ಎಲ್ಲಾ ರಂಗದಲ್ಲೂ ಉದ್ಯೋಗವಕಾಶ ಕಲ್ಪಿಸ ಬೇಕು ಎಂದು ಶಿಫಾರಸ್ಸು ಮಾಡಿತ್ತು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲದ ಕಾರಣ ಇವತ್ತು ಸಹ ಹೆಚ್ಚಿನ ಕನ್ನಡಿಗರು ನಿರುದ್ಯೋಗಿಗಳಾಗಿದ್ದಾರೆ. ಆದುದರಿಂದ ಸರ್ಕಾರ ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರುವ ಮೂಲಕ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿ ಕೂಡಬೇಕು ಎಂಬುದಾಗಿ ಆಗ್ರಹಿಸುತ್ತೇವೆ.
  3. ರಾಜ್ಯಾದ್ಯಂತ ಕೋಮು ಗಲಭೆ ಮಾಡಿಸುವ ನಿಟ್ಟಿನಲ್ಲಿ ಸಂಘಪರಿವಾರ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಆಯೋಜಿಸಿರುವುದು ಶಾಂತಿಯ ನಾಡದ ಕರ್ನಾಟಕಕ್ಕೆ ಒಂದು ಸವಾಲಾಗಿದೆ. ರಾಜ್ಯದಲ್ಲಿ ಆಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ವಿ.ಎಚ್.ಪಿ ಹಾಗೂ ಬಜರಂಗದಳ ಸಂಘಟನೆಗಳ ಪುಂಡಾಟಿಕೆಗೆ ಸರ್ಕಾರ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕು.
  4. ರಾಜ್ಯದ ಜನತೆ ಯಾವ ಮಟ್ಟದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ ಎಂಬ ವಾಸ್ತವಂಶವನ್ನು ಅರಿಯುವ ನಿಟ್ಟಿನಲ್ಲಿ ಸರ್ಕಾರ 2016 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಮಾಡಿಸಿತ್ತು. ಈ ವರದಿಯೂ ಜಾತಿ ಗಣತಿ ಎಂದೇ ಪ್ರಸಿದ್ದವಾಗಿತ್ತು. ಈ ವರದಿ ತಯಾರಿಸಲು ಸರ್ಕಾರ 158 ಕೋಟಿ ಖರ್ಚು ಮಾಡಿದೆ. ವರದಿ ಪೂರ್ಣಗೊಂಡಿದ್ದರೂ ಸಹ ಸರ್ಕಾರ ಇಲ್ಲಿಯವರೆಗೂ ಈ ವರದಿಗೆ ಮಾನ್ಯತೆ ಕೊಟ್ಟಿಲ್ಲ. ವಿವಿಧ ಪಕ್ಷಗಳ ರಾಜಕೀಯ ಹಿತಾಸಕ್ತಿಗಾಗಿ ಸರ್ಕಾರ ಈ ವರದಿಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದೆ. ಬಡ ವರ್ಗದವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗತಿಯ ವಾಸ್ತವಂಶ ಅರಿಯದೆ ಬಡವರ ಪರ ಪ್ರತಿಫಲ ಭರಿತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಸರ್ಕಾರ ಬಡ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವರದಿಯನ್ನು ಅಂಗೀಕರಿಸಿ, ಬಡ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸ ಬೇಕು ಎಂದು ಆಗ್ರಹ.
  5. ಬಡವರು, ಮಧ್ಯಮ ವರ್ಗದವರು ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ಕೊಡಲಿ ಪೆಟ್ಟು ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಕರಾಳ ನೀತಿಯಾಗಿದೆ. ಈ ನೀತಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವುದಲ್ಲದೇ, ಸರ್ಕಾರಿ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಿ, ಖಾಸಗಿತನಕ್ಕೆ ಹೆಚ್ಚು ಒತ್ತು ನೀಡುತ್ತದೆ. ಬಹಳ ಮುಖ್ಯವಾಗಿ ಪಠ್ಯ ಪುಸ್ತಕಗಳ ವಿಷಯಗಳನ್ನು ನಿರ್ಧರಿಸುವ ಹಕ್ಕು ರಾಜ್ಯದಿಂದ ಕಸಿದು ಕೊಳ್ಳುವ ಷಡ್ಯಂತ್ರ ಸೇರಿದಂತೆ ಅನೇಕ ಲೋಪದೋಷಗಳಿರುವ ಈ ರಾಷ್ಟ್ರೀಯ ಶಿಕ್ಷಣ ನೀತಿ ಯಾವ ಕಾರಣಕ್ಕೂ ರಾಜ್ಯದಲ್ಲಿ ಅನುಷ್ಠಾನಗೊಳಿಸ ಬಾರದು ಎಂದು ಒತ್ತಾಯಿಸುತ್ತಿದ್ದೇವೆ.
  6. ಮುಸ್ಲಿಂ ಸಮುದಾಯದ ಏಳಿಗೆಗಾಗಿ ಇರುವ ವಕ್ಫ್ ಆಸ್ತಿಗಳು ಕಬಳಿಕೆ ಆಗಿರುವ ಕುರಿತು ಅನೇಕ ವಕ್ಫ್ ಹಗರಣಗಳು ನಮ್ಮ ರಾಜ್ಯದಲ್ಲಿ ಕಾಣಲು ಸಿಗುತ್ತವೆ. ವಕ್ಫ್ ಆಸ್ತಿ ದುರ್ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ಮತ್ತು ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಸರ್ಕಾರ ರಾಜ್ಯದ್ಯಾಂತ ವಕ್ಫ್ ಆಸ್ತಿಗಳ ಸರ್ವೆ ಕಾರ್ಯವನ್ನು ತ್ವರಿತವಾಗಿ ಮಾಡಿಸ ಬೇಕು ಹಾಗೂ ವಕ್ಫ್ ಆಸ್ತಿ ಹಗರಣದಲ್ಲಿ ಕೇಳಿ ಬಂದಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸ ಬೇಕು ಎಂದು ಈ ಎಸ್.ಆರ್.ಸಿ ಮೂಲಕ ಆಗ್ರಹಿಸುತ್ತಿದ್ದೇವೆ.
  7. ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ ಕಾರಣ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಪ್ರತಿ ದಿನ ಆಗುತ್ತಿರುವ ಬೆಲೆ ಏರಿಕೆಯೂ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕಳೆದ ವರ್ಷ ಒಂದರಲ್ಲೇ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆಯನ್ನು ಸರ್ಕಾರ ನಿರಂತರವಾಗಿ 40-45 ರೂಪಾಯಿಗಳನ್ನು ಏರಿಸಿರುವುದು ಕಂಡು ಬಂದಿದೆ. ಜನರ ಆಕ್ರೋಶಕ್ಕೆ ಮಣಿದ ಸರ್ಕಾರ ಪ್ರಸ್ತುತ ಕೇವಲ 7 ರೂಪಾಯಿಗಳನ್ನು ಕಡಿತಗೊಳಿಸಿದೆ. ಇದು ಜನರ ಕಣ್ಣಿಗೆ ಮಣ್ಣು ಎರಚ್ಚುವ ತಂತ್ರವಾಗಿದೆ. ಜನತೆಯ ಜೀವನದ ಜೊತೆ ಸರ್ಕಾರ ಚೆಲ್ಲಾಟ ಆಡುವುದನ್ನು ನಿಲ್ಲಿಸಿ, ಜನರ ಹಿತಾಸಕ್ತಿಗಾಗಿ ಈ ಕೂಡಲೇ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ತಕ್ಷಣ ಕನಿಷ್ಠ ಪಕ್ಷ 50 ರೂಪಾಯಿಗಳನ್ನು ಕಡಿಮೆ ಮಾಡ ಬೇಕು ಎಂದು ಆಗ್ರಹ.
  8. ಪರಿಶಿಷ್ಟ ಜಾತಿಯಲ್ಲಿನ ಅಸ್ಪೃಶ್ಯ ಜಾತಿಗಳಿಗೆ ಹಾಗೂ ದುರ್ಬಳ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಮೂಲಕ ಅವರನ್ನು ಗುರುತಿಸಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೇ ವ್ಯವಸ್ಥೆ ಕಲ್ಪಿಸ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯದಲ್ಲಿ ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹ.
  9. ತನಗೆ ಬೇಕಾದ ಧರ್ಮವನ್ನು ಸ್ವೀಕರಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಸಲಾಗಿದೆ. ಆದರೆ ಸರ್ಕಾರ ಸಂವಿಧಾನದ ಆಶಯಗಳ ವಿರುದ್ಧವಾಗಿ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಿಸುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಹೊರಟಿರುವುದು ಅತ್ಯಂತ ಖಂಡನೀಯ. ಯಾವ ಕಾರಣಕ್ಕೂ ಸಂವಿಧಾನದ ಆಶಯಗಳ ವಿರುದ್ಧ ಮತಾಂತರ ನಿಷೇಧ ಎಂಬ ಸಂವಿಧಾನ ವಿರೋಧಿ ಕಾನೂನನ್ನು ಜಾರಿಗೊಳಿಸ ಬಾರದು ಒತ್ತಾಯಿಸಲಾಗುತ್ತಿದೆ.
  10. ಕಾನೂನು ಬಾಹಿರವಾಗಿರುವ ಬೀಟ್ ಕಾಯಿನ್ ದಂಧೆಯಲ್ಲಿ ರಾಜ್ಯದ ಪ್ರಭಾವಶಾಲಿಗಳು ಶಾಮೀಲಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇದು ನಮ್ಮ ರಾಜ್ಯಕ್ಕೆ ಕಳಂಕ ತರುವ ವಿಷಯವಾಗಿದೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಂಡು, ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸಿ, ಈ ಅಕ್ರಮ ವ್ಯವಹಾರದಲ್ಲಿ ತೊಡಗಿರುವ ದಂಧೆಕೋರರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸ ಬೇಕು ಎಂದು ಆಗ್ರಹಿಸಲಾಗುತ್ತಿದೆ.
  11. ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಯ ಮಹತ್ವಾಕಾಂಕ್ಷೆ ಹೊಂದಿರುವ ಎತ್ತಿನ ಹೊಳೆ ಯೋಜನೆ 2013-14 ನೇ ಸಾಲಿನಲ್ಲಿ ಕಾಮಗಾರಿ ಆರಂಭವಾಗಿದ್ದು, ಇಲ್ಲಿಯವರೆಗೂ ಇದು ಮುಗಿದಿಲ್ಲ. ಇದರಿಂದ ಈ ಮೂರು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇನ್ನೂ ತೀವ್ರ ಸ್ವರೂಪದಾಗಿ ಬೆಳೆಯುತ್ತಿದೆ. ಆದುದರಿಂದ ಒಂದು ನಿರ್ದಿಷ್ಟ ಸಮಯದೊಳಗೆ ಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಗಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸ ಬೇಕು ಎಂದು ಆಗ್ರಹಿಸಲಾಗುತ್ತಿದೆ.

Leave A Comment