ಒಂದು ವರ್ಷ ಕಾಲ ಐತಿಹಾಸಿಕ ಹೋರಾಟ ನಡೆಸಿ ಜಯಗಳಿಸಿದ ರೈತರನ್ನು ಅಭಿನಂದಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರು, ‘ ರೈತರಿಗೆ ಅಭಿನಂದನೆಗಳು, ಇದು ಸಂತೋಷ ಮತ್ತು ಹೆಮ್ಮೆಯ ಕ್ಷಣ’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನೆಯ ಆರಂಭದಿಂದಲೂ ಪ್ರತಿಭಟನಾನಿರತ ರೈತರಿಗೆ ಬೇಷರತ್ ಬೆಂಬಲ ನೀಡಿರುವ ಮತ್ತು ರೈತರೊಂದಿಗೆ ನಿಂತಿರುವ ಎಸ್ ಡಿಪಿಐ, ರೈತರ ಪ್ರತಿಭಟನೆಗಳು ಮತ್ತು ಹರತಾಳಗಳಲ್ಲಿ ಭಾಗವಹಿಸಿತ್ತು. ಮಾತ್ರವಲ್ಲ ರೈತರೊಂದಿಗೆ ಐಕ್ಯಮತ್ಯ ಪ್ರದರ್ಶಿಸಲು ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ವಿಜಯ ಮತ್ತು ಸಂತೋಷದ ಕ್ಷಣವನ್ನು ಪಕ್ಷ ಹಂಚಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನೀವು ಭಾರತೀಯ ಫ್ಯಾಶಿಸಂ ಅನ್ನು ಮಂಡಿಯೂರುವಂತೆ ಮಾಡಿದ್ದೀರಿ, ಎಷ್ಟೇ ದಬ್ಬಾಳಿಕೆಯ ಆಡಳಿತಗಾರನೂ, ಜನರ ಪ್ರತಿರೋಧ ಮತ್ತು ಆಕ್ರೋಶದ ಎದುರು ನಿಲ್ಲಲು ಸಾಧ್ಯವಿಲ್ಲ ಎಂದು ನೀವು ತೋರಿಸಿದ್ದೀರಿ. ಇದು ದೇಶದ ಕ್ರೂರ ಫ್ಯಾಶಿಸ್ಟ್ ಸರ್ಕಾರದ ವಿರುದ್ಧ ಜನರ ಜಯವಾಗಿದೆ; ಫ್ಯಾಶಿಸಂ ವಿಫಲವಾಗಲೇ ಬೇಕಾಗುತ್ತದೆ ಎಂದು ಫೈಝಿ ಹೇಳಿದರು.
ಕೇಂದ್ರ ಸರ್ಕಾರವು ಅಂಗೀಕರಿಸಿದ್ದ ಕೃಷಿ ಕಾನೂನು ತಿದ್ದುಪಡಿಗಳನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿ ದೇಶದ ಬೆನ್ನೆಲುಬಾಗಿರುವ ರೈತರು ಕಳೆದ ಒಂದು ವರ್ಷದಿಂದ ಬೀದಿಯಲ್ಲಿ ಹೋರಾಟ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ರೈತರ ಚಳವಳಿಯ ಬಗ್ಗೆ ಸರ್ಕಾರದ ಧೋರಣೆ ಹೆಚ್ಚು ನಕಾರಾತ್ಮಕ ಮತ್ತು ನಿರ್ಲಕ್ಷ್ಯದಿಂದ ಕೂಡಿತ್ತು.
ರೈತರ ಸಂಕಟಗಳು ಮತ್ತು ಬೇಡಿಕೆಗಳನ್ನು ಆಲಿಸುವ ಕನಿಷ್ಠ ಪ್ರಜಾಸತ್ತಾತ್ಮಕ ಸೌಜನ್ಯವನ್ನು ಕೂಡ ತೋರಿಸಲು ಅಥವಾ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸುವ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಅವರು ಪ್ರತಿಭಟನೆ ಮತ್ತು ಪ್ರತಿಭಟನಾಕಾರರನ್ನು ಹತ್ತಿಕ್ಕಲು, ಕತ್ತು ಹಿಸುಕಲು ಮತ್ತು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಕೇಂದ್ರ ಸಚಿವರೊಬ್ಬರ ಮಗ ಪ್ರತಿಭಟನಾನಿರತ ರೈತರ ಮೇಲೆ ಅವರ ವಾಹನ ಹರಿಸುವ ಮೂಲಕ ಕೆಲವು ರೈತರನ್ನು ಹತ್ಯೆ ಮಾಡಿದರು. ಕಳೆದ ಒಂದು ವರ್ಷದಲ್ಲಿ ಅನೇಕ ಪ್ರತಿಭಟನಾಕಾರರು ಹುತಾತ್ಮರಾಗಿದ್ದಾರೆ. ಅಂತಿಮವಾಗಿ, ವಿವಾದಾಸ್ಪದ ಕಾನೂನುಗಳನ್ನು ಜಾರಿಗೆ ತಂದೇ ತೀರುತ್ತೇವೆ ಎಂಬ ತಮ್ಮ ಹಿಂದಿನ ಹಠಮಾರಿ ನಿಲುವಿನಿಂದ ಹೊರಬಂದು ಅದನ್ನು ಹಿಂಪಡೆದುಕೊಳ್ಳಲು ಕೇಂದ್ರ ಸರ್ಕಾರವು ಒಪ್ಪಿಕೊಂಡಿದೆ.
ನ್ಯಾಯಕ್ಕಾಗಿ ನಡೆಯುವ ಹೋರಾಟಗಳು ಎಂದಿಗೂ ವಿಫಲವಾಗುವುದಿಲ್ಲ. ಆದರೆ ಗೆಲುವು ಕೆಲವೊಮ್ಮೆ ವಿಳಂಬವಾಗಬಹುದು. ಈ ಚಳುವಳಿಯ ಜಯವು ದುರಹಂಕಾರಿ ಜನವಿರೋಧಿ ಆಡಳಿತಗಾರರಿಗೆ ಅವರ ಪತನದ ಕ್ಷಣಗಣನೆ ಪ್ರಾರಂಭವಾಗಿದೆ ಎಂಬ ವಿಶಿಷ್ಟ ಎಚ್ಚರಿಕೆಯಾಗಿದೆ. ಯಾವುದೇ ನಿರಂಕುಶಪ್ರಭು ಅಥವಾ ಫ್ಯಾಶಿಸ್ಟ್ ಆಡಳಿತಗಾರ ಖಂಡಿತವಾಗಿಯೂ ಬಲವಾದ, ದೃಢವಾದ ಮತ್ತು ಸ್ಥಿರವಾದ ಜನರ ಪ್ರತಿರೋಧದ ಎದುರು ಸೋಲುತ್ತಾನೆ ಎಂದು ಈ ರೈತರ ಗೆಲುವು ತೋರಿಸುತ್ತದೆ. ಸರ್ಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಆಡಳಿತ ಪಕ್ಷದ ದೌರ್ಜನ್ಯಕ್ಕೆ ಒಳಗಾಗಿರುವ ಲಕ್ಷಾಂತರ ಭಾರತೀಯ ಜನರಿಗೆ ಈ ಗೆಲುವು ಸ್ಫೂರ್ತಿಯಾಗಿದೆ. ಆಡಳಿತಗಾರರು ಅರ್ಥ ಮಾಡಿಕೊಳ್ಳಲು ಸಿದ್ಧರಿದ್ದರೆ, ಜನರ ವಿರುದ್ಧವಾಗಿರುವ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂಬ ಪಾಠವನ್ನು ಇದು ನೀಡುತ್ತದೆ. ನ್ಯಾಯವು ಗೆಲ್ಲುತ್ತದೆ ಮತ್ತು ಫ್ಯಾಸಿಸಂ ಸೋಲುತ್ತದೆ.
ಸರ್ಕಾರಿ ಪ್ರಾಯೋಜಕತ್ವದ ಭಯೋತ್ಪಾದನೆ ಮತ್ತು ಆಳುವವರ ಬೆಂಬಲದೊಂದಿಗೆ ರಾಷ್ಟ್ರ ವಿರೋಧಿ ಶಕ್ತಿಗಳ ದೌರ್ಜನ್ಯಗಳಿಗೆ ಸಂತ್ರಸ್ತರಾದವರೆಲ್ಲರೂ ಈ ವಿಜಯದ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅನ್ಯಾಯದ ವಿರುದ್ಧ ಬಲವಾದ ಮತ್ತು ದೃಢವಾದ ಪ್ರತಿರೋಧ ಮತ್ತು ಚಳುವಳಿಗಳ ಮೂಲಕ ಫ್ಯಾಶಿಸ್ಟ್ ಗಳನ್ನು ಸೋಲಿಸಲು ಮತ್ತು ಅಧಿಕಾರದಿಂದ ಕಿತ್ತೊಗೆಯಲು ಒಗ್ಗಟ್ಟಿನಿಂದ ನಿಂತು ದೇಶವನ್ನು ರಕ್ಷಿಸಬೇಕು ಎಂದು ಎಂ.ಕೆ.ಫೈಝಿ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.